ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಆಡಳಿತ ಮಂಡಳಿ ಸ್ಪಂದಿಸಿದೆ. ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಸೇವಾ ಸಮಯವನ್ನು ವಿಸ್ತರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯದ ಪರಾಮರ್ಶನ ವಿಭಾಗ, ನಿಯತಕಾಲಿಕ ವಿಭಾಗ ಮತ್ತು ಗ್ಯಾಲರಿಯನ್ನು ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೆ ತೆರೆಯಲಿದೆ.
ಈ ಮೊದಲು ಗ್ರಂಥಾಲಯದ ಸಮಯ ಬೆಳಗ್ಗೆ 10 ಗಂಟೆಯಿಂದ 5.30ರವರೆಗೆ ಮಾತ್ರ ತೆರೆಯಲಾಗುತ್ತಿತ್ತು. ವಿದ್ಯಾರ್ಥಿಗಳು ಗ್ರಂಥಾಲಯ ಮುಚ್ಚಿದ ಬಳಿಕ ಬೇರೆ ಸ್ಥಳಗಳಲ್ಲಿ ಕೂತು ಓದುತ್ತಿದ್ದರು. ಇದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಆಡಳಿತ ಮಂಡಳಿಗೆ ಗ್ರಂಥಾಲಯದ ಸಮಯವನ್ನು ವಿಸ್ತರಿಸುವಂತೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಆಡಳಿತ ಮಂಡಳಿ ಇದೀಗ ಸಮಯ ವಿಸ್ತರಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.
ಹಸಿರು ಗ್ರಂಥಾಲಯ:ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಈಗಾಗಲೇ ಹಸಿರು ಗ್ರಂಥಾಲಯ ಎನ್ನಿಸಿಕೊಂಡಿದೆ. ಇಲ್ಲಿನ ಪರಿಸರಸ್ನೇಹಿ ವಾತಾವರಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸಬಹುದಾಗಿದೆ. ತೂಗು ಉಯ್ಯಾಲೆ (ಹ್ಯಾಂಗಿಂಗ್ ಲೈಬ್ರರಿ) ಮತ್ತು ಮರದ ನೆರಳಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸಲು ವ್ಯವಸ್ಥೆ ಮಾಡಲಾಗಿದೆ.
ಗ್ರಂಥಾಲಯದಲ್ಲಿ ಉಚಿತ ಇಂಟರ್‌ನೆಟ್ ಸೌಲಭ್ಯವಿದೆ. ಜತೆಗೆ ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ (ಒಪ್ಯಾಕ್) ಮೂಲಕ ವಿಶ್ವದ ಯಾವುದೇ ಸಂಶೋಧನಾ ವರದಿ, ಪ್ರಬಂಧ, ನಿಯತಕಾಲಿಕೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ನಡೆಸಬಹುದಾಗಿದೆ. ಇ-ಪಾಠಶಾಲಾ ಅಡಿಯಲ್ಲಿ ಧ್ವನಿ, ದೃಶ್ಯ, ಅಕ್ಷರ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆಯಲಿದೆ. ಎಂ ಲೈಬ್ರರಿ ಮೊಬೈಲ್ ಆ್ಯಪ್ ಮೂಲಕ ಕೂಡ ವಿದ್ಯಾರ್ಥಿಗಳು ಪುಸ್ತಕಗಳನ್ನು ಅಧ್ಯಯನ ಮಾಡಬಹುದಾದ ವ್ಯವಸ್ಥೆ ನಿರ್ಮಿಸಲಾಗಿದೆ.