ಬೆಂಗಳೂರು:ನಗರದಲ್ಲಿ ಇತ್ತೀಚೆಗೆ ರಾತ್ರಿ ವೇಳೆ ಕೆಲ ಅಪಘಾತ ಪ್ರಕರಣಗಳು ಸಂಭವಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರ ಪೊಲೀಸರು ತಡರಾತ್ರಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪಾನಮತ್ತರಾಗಿ ವಾಹನ ಚಲಾಯಿಸುವವರ ವಿರುದ್ಧ ನಗರದಾದ್ಯಂತ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 17,361ಕ್ಕೂ ಅಧಿಕ ವಾಹನ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡುತ್ತಿದ್ದ ಒಟ್ಟು 386 ಚಾಲಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪಾನಮತ್ತ ವ್ಯಕ್ತಿ ಕಾರಿನಿಂದ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿ, ಹಿಂಬದಿ ಸವಾರ ಗಾಯಗೊಂಡ ಘಟನೆ ಮೇ 19ರಂದು ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಮಣ್ಯ ನಗರ ಮುಖ್ಯ ರಸ್ತೆಯಲ್ಲಿ ನಡೆದಿತ್ತು. ಭೀಕರ ಅಪಘಾತದಲ್ಲಿ ಸುಬ್ರಮಣ್ಯ ನಗರ ನಿವಾಸಿ ವಿನಯ್ (32) ಮೃತಪಟ್ಟಿದ್ದರು. ಅಪಘಾತದ ಬಳಿಕವೂ ಮದ್ಯದ ಅಮಲಿನಲ್ಲಿದ್ದ ಕಾರು ಚಾಲಕ ಹರಿನಾಥ್ನನ್ನು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ:ಅನಧಿಕೃತವಾಗಿ ಐಎಎಸ್ ಅಧಿಕಾರಿಯ ಸಿಡಿಆರ್ ಪಡೆದ ಆರೋಪ; ಮಾಜಿ ಐಪಿಎಸ್ ಅಧಿಕಾರಿ, ಇನ್ಸ್‌ಪೆಕ್ಟರ್ ವಿರುದ್ಧ ಎಫ್ಐಆರ್ - CDR Case