ಬೆಂಗಳೂರು:ನಗರದಲ್ಲಿ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸನ್ಸ್) ಹೊಂದದೆ ಹಾಗೂ 18 ವರ್ಷವಾಗದ ವಿದ್ಯಾರ್ಥಿಗಳು ಬೈಕ್ ಚಲಾಯಿಸುವ ಸಂಖ್ಯೆ ಹೆಚ್ಚಾಗಿದೆ. ಈ ಮೂಲಕ ಅಪಘಾತ ಪ್ರಮಾಣ ಹೆಚ್ಚಳಕ್ಕೆ ಕಾರಣರಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ವಿದ್ಯಾರ್ಥಿಗಳ ಪೋಷಕರಿಗೆ ದಂಡ ವಿಧಿಸಿ ಬೈಕ್ ನೀಡದಂತೆ ತಾಕೀತು ಮಾಡಿದ್ದಾರೆ.
ನಗರದಲ್ಲಿ 1,500ಕ್ಕೂ ಹೆಚ್ಚು ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಪೋಷಕರಿಗೆ ಸಂಚಾರಿ ಪೊಲೀಸರು ದಂಡದ ಬರೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಮಕ್ಕಳು ಶಾಲಾ-ಕಾಲೇಜುಗಳಿಗೆ ದ್ವಿಚಕ್ರ ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಈ ಸಂಖ್ಯೆ ವಿಪರೀತವಾದಂತೆ ಟ್ರಾಫಿಕ್ ಪೊಲೀಸರು ಎಚ್ಚೆತ್ತುಕೊಂಡು ನಗರದ 150ಕ್ಕೂ ಹೆಚ್ಚು ಶಾಲಾ-ಕಾಲೇಜುಗಳಿಗೆ ತೆರಳಿ ತಪಾಸಣೆ ನಡೆಸಿದ್ದಾರೆ.