ಕರ್ನಾಟಕ

karnataka

ETV Bharat / state

ಒಂದು ತಿಂಗಳು ಡಿಜಿಟಲ್ ಅರೆಸ್ಟ್: ಬೆಂಗಳೂರಿನ ಸಾಫ್ಟ್‌ವೇರ್ ಉದ್ಯೋಗಿಗೆ 11.83 ಕೋಟಿ ರೂ. ವಂಚನೆ - DIGITAL ARREST

ಬೆಂಗಳೂರಿನ ಸಾಫ್ಟ್​ವೇರ್ ಉದ್ಯೋಗಿಯೊಬ್ಬರಿಗೆ ವಂಚಕರು ಡಿಜಿಟಲ್ ಅರೆಸ್ಟ್ ಮೂಲಕ ಬೆದರಿಸಿ ಬರೋಬ್ಬರಿ 11.83 ಕೋಟಿ ರೂ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.

ಡಿಜಿಟಲ್ ಅರೆಸ್ಟ್, Digital Arrest, Bengaluru Techie lost 11 crore
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Dec 22, 2024, 7:04 PM IST

Updated : Dec 22, 2024, 7:19 PM IST

ಬೆಂಗಳೂರು:ನಗರದಸಾಫ್ಟ್‌ವೇರ್ ಉದ್ಯೋಗಿಯೊಬ್ಬರನ್ನ ಬರೋಬ್ಬರಿ 1 ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಬೀಳಿಸಿದ ವಂಚಕರು, ಬರೋಬ್ಬರಿ 11.83 ಕೋಟಿ ರೂ. ದೋಚಿರುವ ಘಟನೆ ನಡೆದಿದೆ. ಆ ಮೂಲಕ ಇಲ್ಲಿಯವರೆಗೆ ರಾಜ್ಯದಲ್ಲಿ ವರದಿಯಾದ ಅತ್ಯಧಿಕ ಮೊತ್ತ ಕಳೆದುಕೊಂಡ ಡಿಜಿಟಲ್ ಅರೆಸ್ಟ್ ಪ್ರಕರಣ ಇದಾಗಿದೆ. ಹಣ ಕಳೆದುಕೊಂಡಿರುವ ವಿಜಯ್ ಕುಮಾರ್ ಎಂಬುವರು ನೀಡಿರುವ ದೂರಿನನ್ವಯ ಬೆಂಗಳೂರು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಂಚಕರು ಮೋಸ ಮಾಡಿದ್ದು ಹೇಗೆ? ಇಲ್ಲಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಜಯ್‌ ಕುಮಾರ್‌ ಅವರಿಗೆ ನವೆಂಬರ್ 11ರಂದು ಬೆಳಗ್ಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ ತನ್ನನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ (ಟ್ರಾಯ್‌) ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ. ಬಳಿಕ "ನಿಮ್ಮ ಆಧಾರ್‌ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್‌ ನಂಬರ್‌ನ್ನು ಕಾನೂನುಬಾಹಿರ ಜಾಹೀರಾತು ಹಾಗೂ ಸಂದೇಶಗಳ ರವಾನೆಗೆ ಬಳಸಲಾಗಿದೆ. ಆ ನಂಬರ್‌ನಲ್ಲಿ ಸೇವೆಯನ್ನ ಸ್ಥಗಿತಗೊಳಿಸಲಾಗುತ್ತಿದೆ. ಹಾಗೂ ಮುಂಬೈನ ಕೊಲಾಬಾದ ಸೈಬರ್‌ ಕ್ರೈಂ ಠಾಣೆಯಲ್ಲಿ ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದ್ದು, ನೀವು ವಿಚಾರಣೆ ಎದುರಿಸಬೇಕಾಗುತ್ತದೆ'' ಎಂದು ಬೆದರಿಸಿದ್ದಾನೆ.

ಇದಾದ ಕೆಲವೇ ನಿಮಿಷಗಳಲ್ಲಿ ಕರೆ ಮಾಡಿದ್ದ ಮತ್ತೋರ್ವ ಅಪರಿಚಿತ ಸ್ಕೈಪ್‌ ವಿಡಿಯೋ ಕಾಲಿಂಗ್ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ. ಅದರಂತೆ ವಿಜಯ್‌ ಕುಮಾರ್‌ ಅವರು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಬಳಿಕ ಪೊಲೀಸ್‌ ಧಿರಿಸಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಕರೆ ಮಾಡಿ, ''ನಾನು ಮುಂಬೈ ಪೊಲೀಸ್‌ ಅಧಿಕಾರಿ'' ಎಂದು ಹೇಳಿದ್ದಾನೆ. "ಉದ್ಯಮಿ ನರೇಶ್‌ ಗೋಯಲ್‌ ಎಂಬುವರು ನಿಮ್ಮ ಆಧಾರ್‌ ಕಾರ್ಡ್‌ ಬಳಸಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು 6 ಕೋಟಿ ರೂ. ವಹಿವಾಟು ನಡೆಸಿದ್ದಾರೆ. ಆದ್ದರಿಂದ ಅಕ್ರಮ ಹಣ ವರ್ಗಾವಣೆ ಆರೋಪದಡಿ ಡಿಜಿಟಲ್‌ ಅರೆಸ್ಟ್‌ ಮಾಡುತ್ತಿರುವುದಾಗಿ'' ಬೆದರಿಸಿದ್ದಾನೆ. ಪ್ರಕರಣದ ತನಿಖೆಯ ಕುರಿತಂತೆ ಯಾರಿಗೂ ಮಾಹಿತಿ ನೀಡಬಾರದೆಂದು ಸೂಚಿಸಿದ್ದಾನೆ.

ನವೆಂಬರ್ 25 ರಂದು ಪುನಃ ಸ್ಕೈಪ್‌ ಮೂಲಕ ವಿಡಿಯೋ ಕರೆ ಮಾಡಿದ್ದ ವಂಚಕ, "ನಿಮ್ಮ ವಿರುದ್ಧದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ಕುಟುಂಬ ಸದಸ್ಯರನ್ನ ಸಹ ಬಂಧಿಸಬೇಕಾಗುತ್ತದೆ. ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್‌ ಖಾತೆಯನ್ನ ಪರಿಶೀಲಿಸಬೇಕಿದ್ದು, ಹಣ ವರ್ಗಾವಣೆ ಮಾಡಬೇಕು'' ಎಂದಿದ್ದಾನೆ.

ಹಂತಹಂತವಾಗಿ ಹಣ ವರ್ಗಾವಣೆ: ಅದರಂತೆ ಮೊದಲ ಬಾರಿಗೆ ವಂಚಕರು ನೀಡಿದ್ದ ಬ್ಯಾಂಕ್‌ ಖಾತೆಗೆ ವಿಜಯ್ ಕುಮಾರ್ ಅವರು 75 ಲಕ್ಷ ರೂ. ಬಳಿಕ ಮತ್ತೊಂದು ಖಾತೆಗೆ 3.41 ಕೋಟಿ ರೂ. ವರ್ಗಾಯಿಸಿದ್ದಾರೆ. ಇದೇ ರೀತಿ ಡಿಸೆಂಬರ್ 12ರ ವರೆಗೂ ಪ್ರತಿನಿತ್ಯ ವಿಜಯ್‌ಕುಮಾರ್‌ಗೆ ಕರೆ ಮಾಡಿ ಬಂಧನದ ಬೆದರಿಕೆಯೊಡ್ಡಿರುವ ಆರೋಪಿಗಳು ಒಟ್ಟು 11.83 ಕೋಟಿ ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.

ಬ್ಯಾಂಕ್‌ ಖಾತೆಯಲ್ಲಿದ್ದ ಹಣ ಖಾಲಿಯಾದ ಬಳಿಕವೂ ಸಹ ವಂಚಕರ ಕಿರುಕುಳ ಮುಂದುವರೆದಾಗ ಇದು ಸೈಬರ್‌ ವಂಚಕರ ಕೃತ್ಯವೆಂಬುದು ವಿಜಯ್ ಕುಮಾರ್ ಅವರಿಗೆ ಅರಿವಾಗಿದೆ. ನಂತರ ಈಶಾನ್ಯ ವಿಭಾಗದ ಸಿಇಎನ್ ಠಾಣೆಗೆ ವಿಜಯ್ ಕುಮಾರ್ ದೂರು ನೀಡಿದ್ದಾರೆ. ವಂಚಕರು ಹಣ ವರ್ಗಾಯಿಸಿಕೊಂಡಿರುವ ಖಾತೆಗಳ ವಿವರ ಸಂಗ್ರಹಿಸಲಾಗುತ್ತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

11 ತಿಂಗಳಲ್ಲಿ 491 ಡಿಜಿಟಲ್‌ ಅರೆಸ್ಟ್‌ ಪ್ರಕರಣ:ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ದಾಖಲಾಗಿರುವ ಪಟ್ಟಿಯಲ್ಲಿ ಕರ್ನಾಟಕವು ದೇಶದಲ್ಲೇ 2ನೇ ಸ್ಥಾನ ಪಡೆದಿದೆ. 2024ರ ನವೆಂಬರ್‌ ಅಂತ್ಯಕ್ಕೆ ರಾಜ್ಯದಲ್ಲಿ 641 ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳು ವರದಿಯಾಗಿದ್ದು, 109 ಕೋಟಿ ರೂ. ವಂಚಕರ ಪಾಲಾಗಿದೆ. ಆ ಪೈಕಿ ಬೆಂಗಳೂರಿನಲ್ಲಿ 480 ಪ್ರಕರಣಗಳು ವರದಿಯಾಗಿದ್ದು 42.4 ಕೊಟಿ ರೂ. ವಂಚಿಸಲಾಗಿದೆ. ಕೇವಲ 9 ಕೋಟಿ ರೂ. ಮಾತ್ರ ವಾಪಸ್ ಜಪ್ತಿ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

''7 ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ, ಆ ಖಾತೆಗಳ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪೊಲೀಸರು, ಕೊರಿಯರ್ ಕಂಪನಿಯ ಪ್ರತಿನಿಧಿಗಳು, ಇತರೆ ಇಲಾಖೆಗಳ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ವಂಚಿಸುತ್ತಿರುವುದರ ಕುರಿತು ನಿರಂತರವಾಗಿ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರು ಅಂತಹ ಕರೆಗಳ ಬಗ್ಗೆ ಆತಂಕಪಡಬಾರದು. ಆ ರೀತಿಯ ಕರೆಗಳ ಬಗ್ಗೆ ತಕ್ಷಣ ಸೈಬರ್‌ ಕ್ರೈಂ ಸಹಾಯವಾಣಿ 1930ಕ್ಕೆ ದೂರು ನೀಡಬೇಕು'' ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದರು.

ಇದನ್ನೂ ಓದಿ: ಹುಷಾರ್​​​​​​​​​​​​​.. ಈ ಸಂಖ್ಯೆಗಳಿಂದ ನಿಮಗೆ ಕರೆಗಳು ಬರುತ್ತಿವೆಯಾ?: ಹಾಗಾದರೆ ಈ ಕರೆಗಳನ್ನು ಎತ್ತಲೇಬೇಡಿ! ಏಕೆ ಅಂತೀರಾ?

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಗ್ತಿದೆ 'ಡಿಜಿಟಲ್ ಅರೆಸ್ಟ್' ವಂಚನೆ: ದಾಖಲಾದ ಪ್ರಕರಣವೆಷ್ಟು? ಪೊಲೀಸರು ಬಂಧಿಸಿದ್ದೆಷ್ಟು?

Last Updated : Dec 22, 2024, 7:19 PM IST

ABOUT THE AUTHOR

...view details