ಬೆಂಗಳೂರು:ರಫ್ತು ವಹಿವಾಟಿನಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಾಜ್ಯದ ವಿವಿಧ ಐಟಿ(ಮಾಹಿತಿ ತಂತ್ರಜ್ಞಾನ) ಕಂಪನಿಗಳಿಗೆ ಭಾರತೀಯ ಸಾಫ್ಟ್ವೇರ್ ಪಾರ್ಕ್ಗಳ ಕೂಟ (ಎಸ್.ಟಿ.ಪಿ.ಐ) ನೀಡುವ ಪುರಸ್ಕಾರವನ್ನು ಬುಧವಾರ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಪ್ರದಾನ ಮಾಡಲಾಯಿತು.
ಅತ್ಯುತ್ತಮ ಸಾಧನೆ ಮಾಡಿರುವ ಇನ್ಫೋಸಿಸ್ ಕಂಪನಿಗೆ 'ಕರ್ನಾಟಕದ ಐಟಿ ರತ್ನ', ಅತ್ಯುತ್ತಮ ಐಟಿ ರಫ್ತು ಕಂಪನಿಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ರಾಬರ್ಟ್ ಬಾಷ್, ಇಂಟೆಲ್ ಮುಂತಾದ ಕಂಪನಿಗಳಿಗೆ ಎಸ್.ಟಿ.ಪಿ.ಐ-ಐಟಿ ಪ್ರಶಸ್ತಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರದಾನ ಮಾಡಿದರು.
ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ.ಪಿ.ಮಾರ್ಗನ್ ಸರ್ವೀಸಸ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ ಆ್ಯಡ್ ಡಿ, ಕ್ವಾಲ್ಕಾಂ ಇಂಡಿಯಾ, ಸ್ನೀಡರ್ ಎಲೆಕ್ಟ್ರಿಕ್, ಅಲ್ಟ್ರಾನ್ ಟೆಕ್ ಇಂಡಿಯಾ, ಸ್ಯಾಪ್ ಲ್ಯಾಬ್ಸ್, ವಿಎಂವೇರ್ ಸಾಫ್ಟ್ವೇರ್ಸ್,ಆಕ್ಸೆಂಚರ್ ಸೊಲ್ಯೂಷನ್ಸ್ ಪರವಾಗಿ ಸಂಸ್ಥೆಗಳ ಉನ್ನತಾಧಿಕಾರಿಗಳು ಪ್ರಶಸ್ತಿ ಸ್ವೀಕರಿಸಿದರು.
ಬಳಿಕ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, "ಉದ್ಯಮಿಗಳು ಕೇವಲ ವಾಣಿಜ್ಯ ದೃಷ್ಟಿಯ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ. ತಮ್ಮ ಪರಿಶ್ರಮ ಮತ್ತು ಬದ್ಧತೆಗಳ ಮೂಲಕ ತಂತ್ರಜ್ಞಾನದ ಭವಿಷ್ಯವನ್ನು ಕೂಡ ನಿರ್ಧರಿಸುತ್ತಾರೆ. ಇದರ ಲಾಭ ಕೊನೆಗೆ ಸಮಾಜಕ್ಕೆ ಸಿಗುತ್ತದೆ. ರಾಜ್ಯದಲ್ಲಿ ನೆಲೆಯೂರಿರುವ ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳು ಈ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿವೆ" ಎಂದು ಅಭಿಪ್ರಾಯಪಟ್ಟರು.