ಬೆಂಗಳೂರು: ಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ದೇವಸ್ಥಾನದಲ್ಲಿ ಕೃಷ್ಣನಿಗೆ ವಿವಿಧ ಅಲಂಕಾರ, ಪೂಜೆಗಳ ಜತೆ ಅನೇಕ ಭಕ್ಷ್ಯ ಭೋಜನಗಳ ನೈವೇದ್ಯವನ್ನು ಭಕ್ತರು ಅರ್ಪಿಸುತ್ತಾರೆ. ಅಲ್ಲದೇ, ತಮ್ಮ ಮಕ್ಕಳಿಗೆ ಕೃಷ್ಣ-ರಾಧೆ ಉಡುಗೆ ತೊಡಿಸಿ ಸಂತಸಪಡುತ್ತಾರೆ. ವಿಶೇಷವಾಗಿ ಬೆಂಗಳೂರಿನ ಪ್ರಸಿದ್ಧ ದೇವಾಲಯವಾದ ಇಸ್ಕಾನ್ ಸಾವಿರಾರು ಭಕ್ತರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ.
ನಾಳೆ ಇಸ್ಕಾನ್ ದೇವಾಲಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನಡೆಯಲಿದೆ. ಈ ಹಿನ್ನಲೆಯಲ್ಲಿ ಹರೇ ಕೃಷ್ಣ ಬೆಟ್ಟ, ವೈಕುಂಠ ಬೆಟ್ಟ ಮತ್ತು ಕೆಟಿಪಿಒ ವೈಟ್ ಫೀಲ್ಡ್‌ನಲ್ಲಿ ಇಂದೂ ಕೂಡಾ ಮೂರು ಸ್ಥಳಗಳಲ್ಲಿ ಶ್ರೀ ಕೃಷ್ಣನಿಗೆ ವಿಶೇಷ ನೈವೇದ್ಯ, ಪುಷ್ಪಾಂಜಲಿ ಸೇವೆ, ಪಲ್ಲಕ್ಕಿ ಉತ್ಸವ ಮತ್ತು ಉಯ್ಯಾಲೆ ಸೇವೆ, 108 ಪ್ರಸಾದದ ವಿಶೇಷ ನೈವೇದ್ಯವೂ ಮಾಡಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿತರಿಸಲಾಗುತ್ತಿದೆ.
ಆ.26ರ ಮಧ್ಯರಾತ್ರಿ ಕೃಷ್ಣನಿಗೆ ಅಭಿಷೇಕ ನಡೆಸಲಾಗುತ್ತದೆ. ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ಪುಷ್ಪಾಂಜಲಿ, ಮಖನ್ ಮಿಶ್ರಿ ಮತ್ತು ಇತರೆ ಸೇವೆಗಳನ್ನು ಮಾಡಿ ಶ್ರೀ ಕೃಷ್ಣನನ್ನು ಮೆಚ್ಚಿಸಲು ಕಳೆದೆರಡು ದಿನಗಳ ಹಿಂದಿನಿಂದಲೇ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿ ಉತ್ಸವದಲ್ಲಿ 25 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬರುವ ನಿರೀಕ್ಷೆ ಇದೆ ಎಂದು ಇಸ್ಕಾನ್ ದೇವಾಲಯದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.