ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ಇಂದು ಕೂಡ ಜನರು ನಿರತರಾಗಿದ್ದಾರೆ. ಕಲರ್‌ಫುಲ್ ಆಕಾಶಬುಟ್ಟಿ, ವಿವಿಧ ವಿನ್ಯಾಸಗಳ ಹಣತೆ, ನಾನಾ ರೀತಿಯ ಪಟಾಕಿಗಳ ಖರೀದಿಯಲ್ಲಿ ಮಕ್ಕಳು ಸೇರಿದಂತೆ ಜನತೆ ಉತ್ಸಾಹ ತೋರುತ್ತಿರುವುದು ಕಂಡು ಬಂದಿತು.
ಬೆಂಗಳೂರಿನ ಪ್ರಮುಖ ಮಾರುಕಟ್ಟೆಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳಲ್ಲಿ ಗುರುವಾರ ಕೂಡ ಜನಜಂಗುಳಿ ಇತ್ತು. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್. ಮಾರುಕಟ್ಟೆ, ಗಾಂಧಿ ಬಜಾರ್, ಯಶವಂತಪುರ, ಬಸವನಗುಡಿ, ಮಲ್ಲೇಶ್ವರ, ಕೆ.ಆರ್.ಪುರ, ಬನಶಂಕರಿ ಮಾರುಕಟ್ಟೆಗಳಲ್ಲಿ ಹೂವು-ಹಣ್ಣುಗಳ ಖರೀದಿ ಜೋರಾಗಿದ್ದರೆ, ಜಯನಗರ, ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್, ಮಲ್ಲೇಶ್ವರದಲ್ಲಿ ಝಗಮಗಿಸುವ ಆಕಾಶಬುಟ್ಟಿಗಳು, ವಿಭಿನ್ನ ಮಾದರಿಯ ದೀಪ, ಪಟಾಕಿಗಳ ಖರೀದಿಯ ಭರಾಟೆ ಜೋರಾಗಿತ್ತು.
ಹೂವು - ಹಣ್ಣುಗಳ ಬೆಲೆ: ಒಂದು ಕೆಜಿ ಸೇವಂತಿಗೆ ಹೂವಿಗೆ 250 ರಿಂದ 300 ರೂ, ಗುಲಾಬಿ 300 ರೂ, ಮಲ್ಲಿಗೆ 800 ರಿಂದ 1,000 ರೂ, ಕನಕಾಂಬರ 1,200 ರಿಂದ 1,600 ರೂ, ಚೆಂಡು 150 ರೂ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಆಗುತ್ತಿದೆ. ಇನ್ನು ಒಂದು ಕೆಜಿ ಸೇಬು ಹಣ್ಣಿಗೆ 150 ರಿಂದ 170 ರೂ, ದ್ರಾಕ್ಷಿ 90 ರೂ, ಕಿತ್ತಳೆ 45 ರಿಂದ 50 ರೂ, ಅನಾನಸ್ 60ರೂ, ದಾಳಿಂಬೆ 150 ರಿಂದ 200 ರೂ, ಸಪೋಟ 65 ರೂ, ಬಾಳೆ ಹಣ್ಣು 115 ರೂ, ಮೂಸಂಬಿ 60 ರೂ, ಸೀತಾಫಲ 50 ರೂಗೆ ವ್ಯಾಪಾರ ಆಗುತ್ತಿದೆ.
ತರಕಾರಿ ಬೆಲೆ:ಒಂದುಕೆಜಿ ಆಲೂಗಡ್ಡೆ 40 ರೂ, ಈರುಳ್ಳಿ 40 ರೂ, ಕ್ಯಾರೆಟ್ 60 ರೂ, ಟೊಮ್ಯಾಟೊ 40 ರೂ, ಮೆಣಸಿನಕಾಯಿ 80 ರೂ, ಸೌತೆಕಾಯಿ 30 ರೂ, ಬೀನ್ಸ್ 100 ರೂ, ಬದನೆಕಾಯಿ 60 ರೂ, ಸೀಮೆ ಬದನೆ 80 ರೂ, ಹಸಿ ಬಟಾಣಿ 180 ರಿಂದ 200ರೂ, ಹೀರೇಕಾಯಿ 80 ರೂ, ಹಾಗಲಕಾಯಿ 60 ರೂ, ಬೆಳ್ಳುಳ್ಳಿ 380 ರೂ, ಶುಂಠಿ 240 ರೂ.ನಂತೆ ಮಾರಾಟ ಮಾಡಲಾಗಿದೆ.