ಬೆಂಗಳೂರು:ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾಡುಗೊಂಡಹಳ್ಳಿ(ಕೆ.ಜಿ.ಹಳ್ಳಿ) ನಿಲ್ದಾಣದಲ್ಲಿ ಗುರುವಾರ ಭದ್ರ ಸುರಂಗ ಕೊರೆಯುವ ಯಂತ್ರವು ಹೊರ ಬಂದಿತು. ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ನಡೆಯುತ್ತಿರುವ ಮೆಟ್ರೋ ಕಾಮಗಾರಿ 2025ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್) ತಿಳಿಸಿದೆ.
ಮೆಟ್ರೋ ಕಾಮಗಾರಿ ವೀಕ್ಷಿಸಿದ ಡಿಸಿಎಂ ಭದ್ರ ಸುರಂಗ ಕೊರೆಯುವ ಯಂತ್ರವು ವೆಂಕಟಪುರ ಮತ್ತು ಕಾಡುಗೊಂಡನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ 1,185.80 ಮೀಟರ್ ಸುರಂಗ ಕಾಮಗಾರಿಯನ್ನು ಪೂರ್ಣಗೊಳಿಸಿದೆ. ಈ ಯಂತ್ರವು 2023ರ ಫೆಬ್ರವರಿಯಲ್ಲಿ ವೆಂಕಟಪುರ ಮೆಟ್ರೋ ನಿಲ್ದಾಣದಲ್ಲಿ ಸುರಂಗ ಕಾಮಗಾರಿ ಆರಂಭಿಸಿತ್ತು. ಕೆ.ಜಿ.ಹಳ್ಳಿಯಿಂದ ನಾಗವಾರ ನಿಲ್ದಾಣದ ಬಳಿ ಸುರಂಗ ಮಾರ್ಗದ ಕಾಮಗಾರಿಗಾಗಿ ಈ ಭದ್ರ ಸುರಂಗ ಕೊರೆಯುವ ಯಂತ್ರವನ್ನು ನಿಯೋಜಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಜನರು ಹೆಚ್ಚಾಗಿ ಮೆಟ್ರೋ ಬಳಸಬೇಕು ಎನ್ನುವುದು ಸರ್ಕಾರದ ಆದ್ಯತೆ. ಅದಕ್ಕೆ ಹೆಚ್ಚು ಒತ್ತು ಕೊಟ್ಟು ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದೆ. ನಾಗವಾರದವರೆಗೆ 1.18 ಕಿಲೋ ಮೀಟರ್ ಸುರಂಗ ಕೊರೆಯಲಾಗಿದೆ. 13.76 ಕಿಲೋ ಮೀಟರ್ ಪಿಂಕ್ ಮಾರ್ಗ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಮೆಟ್ರೋ ಕಾಮಗಾರಿ ವೀಕ್ಷಿಸಿದ ಡಿಸಿಎಂ ಕೊಟ್ಟಿಗೆರೆ - ನಾಗವಾರದ ವರೆಗೆ ನೂತನವಾಗಿ ಪಿಂಕ್ ಮಾರ್ಗ ಕಲ್ಪಿಸಲಾಗುತ್ತಿದೆ. ಒಟ್ಟು 4 ಅಂಡರ್ ಗ್ರೌಂಡ್ ಮೆಟ್ರೋ ನಿಲ್ದಾಣಗಳು ಇವೆ. 2025 ಕ್ಕೆ 4 ಮೆಟ್ರೋ ನಿಲ್ದಾಣಗಳು ಉದ್ಘಾಟನೆ ಆಗುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ ಮಾಡುತ್ತೇವೆ. ದೆಹಲಿ ಸೇರಿದಂತೆ ಹಲವೆಡೆ ಪರಿಶೀಲನೆ ಮಾಡಿದ್ದೇನೆ. ಬೇರೆಡೆಗಿಂತ ಇಲ್ಲಿ ಸ್ಟ್ಯಾಂಡರ್ಡ್ ಕ್ವಾಲಿಟಿ ಮೆಂಟೈನ್ ಮಾಡಲಾಗುತ್ತಿದೆ. ನಗರದಲ್ಲಿ ಅನೇಕ ಸುರಂಗ ಮಾರ್ಗ ಕೊರೆಯಲು ಕಾರ್ಯ ರೂಪಿಸಲಾಗಿದೆ. ಸುರಂಗ ಮಾರ್ಗ ಕೊರೆಯುವುದರಿಂದ ಆಗುವ ಎಫೆಕ್ಟ್ ಬಗ್ಗೆಯೂ ಚರ್ಚೆಗಳು ನಡೆಸಿದ್ದು, ಅದಕ್ಕಾಗಿಯೇ ಟನಲ್ ಕೊರೆಯುವ ಬಗ್ಗೆ ಪರಿಶೀಲನೆ ನಡೆಸಿದ್ದೇನೆ ಎಂದರು.
ಇದನ್ನೂ ಓದಿ: ಮುಖ್ಯಮಂತ್ರಿಗಳ ಜನಸ್ಪಂದನ ಕಾರ್ಯಕ್ರಮದಲ್ಲಿ 12,372 ಅರ್ಜಿ ಸ್ವೀಕಾರ