ಬೆಂಗಳೂರು:ರಾಜಧಾನಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಅಭಾವದ ನಡುವೆಯೂ ನಗರದ ಶಾಸ್ವಕೋಶದಂತಿರುವ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ಅನ್ನು ನಿರ್ವಹಣೆ ಮಾಡುವುದು ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ಗೆ ತಲಾ 1.5 ಎಂಎಲ್ಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ನಿರ್ಮಾಣ ಮಾಡಲಾಗಿದೆ. ಈ ಘಟಕಗಳಲ್ಲಿ ಪ್ರಸ್ತುತ 0.8 ಎಂಲ್ಡಿ ನೀರು ಲಭ್ಯವಾಗುತ್ತಿದೆ. ಇದರಿಂದ ಉದ್ಯಾನವನ್ನು ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಎಲ್ಲ ಗಿಡಗಳಿಗೆ ಅಗತ್ಯವಿರುವಷ್ಟು ಪೂರೈಕೆ ಮಾಡುವುದು ದೊಡ್ಡ ಸವಾಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಳೆಗಾದಲ್ಲಿ ಇಡೀ ಉದ್ಯಾನವನದ ಹುಲ್ಲು ಹಾಸು ಮತ್ತು ಗಿಡಮರಗಳಿಗೆ ಅಗತ್ಯ ಪ್ರಮಾಣಕ್ಕಿಂತಲೂ ಹೆಚ್ಚು ನೀರನ್ನು ಲಭ್ಯವಾಗುತ್ತಿತ್ತು. ಇದೀಗ ನೀರಿನ ಕೊರತೆ ಉಂಟಾಗುತ್ತಿರುವುದರಿಂದ ಅನಗತ್ಯವಾಗಿರುವ ಹುಲ್ಲಿನ ಹಾಸುಗಳು ಮತ್ತು ಬೃಹತ್ ಮರಗಳಿಗೆ ನೀರು ಹರಿಸುವ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.
ಆದರೆ ನೀರು ಹರಿಸದಿದ್ದಲ್ಲಿ ಸತ್ತು ಹೋಗಲಿವೆ ಎನ್ನುವಂತಹ ಗಿಡಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದು, ಅಗತ್ಯವಿರುವಷ್ಟ ನೀರನ್ನು ಹರಿಸಲಾಗುತ್ತಿದೆ. ಆದರೆ ಪ್ರಸ್ತುತ ಮಳೆಯಾದಲ್ಲಿ ಉದ್ಯಾನವನದ ನಿರ್ವಹಣೆ ಮಾಡುವುದಕ್ಕೆ ಉತ್ತಮವಾಗಲಿದೆ ಎಂದು ಲಾಲ್ಬಾಗ್ ಉಪನಿರ್ದೇಶಕಿ ಕುಸುಮಾ ಸ್ಪಷ್ಟಪಡಿಸಿದರು.