ಬೆಂಗಳೂರು ನಗರ ಅಪರ ಪೊಲೀಸ್ ಆಯುಕ್ತ ಚಂದ್ರಗುಪ್ತ (ETV Bharat) ಬೆಂಗಳೂರು: ಮೈಸೂರು ಜಿಲ್ಲೆಯ ಕೆಲವು ಗಣ್ಯರಿಗೆ ಹನಿಟ್ರ್ಯಾಪ್ ಬಲೆಗೆ ಬೀಳಿಸಲು ಪ್ರಯತ್ನಿಸಿ, ಹಣಕ್ಕೆ ಡಿಮ್ಯಾಂಡ್ ಮಾಡಿದ ಆರೋಪದಡಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಮೈಸೂರು ಮೂಲದ ಸಂತೋಷ್ ಹಾಗೂ ಪುಟ್ಟರಾಜು ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರಕರಣದಲ್ಲಿ ಇನ್ನೋರ್ವ ಭಾಗಿಯಾಗಿದ್ದು, ಆತನ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪರಿಚಯದ ಮೂಲಗಳಿಂದ ಮಾಹಿತಿ ಪಡೆದುಕೊಂಡು, ಕಾರ್ಯಕ್ರಮಗಳಲ್ಲಿ ಮಹಿಳೆಯರೊಂದಿಗೆ ತೆಗೆಸಿಕೊಳ್ಳುವ ಫೋಟೋ-ವಿಡಿಯೋಗಳನ್ನು ಆರೋಪಿಗಳು ಇಟ್ಟುಕೊಂಡು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಇದನ್ನೂ ಓದಿ:ದರ್ಶನ್ ತಂಡದಿಂದ 70 ಲಕ್ಷ ರೂ. ಜಪ್ತಿ: ಐಟಿ, ಇನ್ಸ್ಟಾಗ್ರಾಮ್ಗೆ ಪತ್ರ ಬರೆದ ಪೊಲೀಸರು - 70 lakhs detained from Darshan Team
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಹಲವು ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿ ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ತನಿಖೆ ಪೂರ್ಣಗೊಂಡ ಬಳಿಕ ಪೆನ್ಡ್ರೈವ್ ಹಂಚಿದವರು ಯಾರೆಂದು ತಿಳಿಯಲಿದೆ: ಸಚಿವ ಪರಮೇಶ್ವರ್ - G Parameshwar
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ವಿಭಾಗದ ಅಪರ ಪೊಲೀಸ್ ಆಯುಕ್ತ (ಅಪರಾಧ) ಚಂದ್ರಗುಪ್ತ, ಕಳೆದ ಕೆಲ ದಿನಗಳ ಹಿಂದೆ ಸಿಸಿಬಿ ಠಾಣೆಗೆ ದೂರು ಬಂದಿತ್ತು. ಗ್ಯಾಂಗ್ ಒಂದು ಕೆಲವೊಂದು ಅಂಶಗಳ ಮೇಲೆ ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ಅವರ ಹೇಳಿಕೆಗಳನ್ನು ಪಡೆದುಕೊಂಡಿದ್ದೇವೆ. ಈ ಗ್ಯಾಂಗ್ನಲ್ಲಿ ಈವರೆಗೆ ಮೂವರು ಇರುವುದು ಪತ್ತೆಯಾಗಿದೆ. ಇಬ್ಬರ ಬಂಧನವಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಬೇರೆಯವರಿಗೂ ಈ ರೀತಿ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಬೇರೆ ಬೇರೆ ನಂಬರ್ಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.