ಬೆಂಗಳೂರು: ಸಂಬಳ ಕೊಡದಿದ್ದಕ್ಕೆ ಕುಡಿದ ನಶೆಯಲ್ಲಿ ರೆಸ್ಟೋರೆಂಟ್ನಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾಣಸವಾಡಿ ನಿವಾಸಿ ವೇಲು ಎಂಬಾತ ಆರೋಪಿಯಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ನಿನ್ನೆ ತಡರಾತ್ರಿ ಮಹದೇವಪುರದ ಪಾಸ್ತಾ ರೆಸ್ಟೋರೆಂಟ್ಗೆ ಕರೆ ಮಾಡಿದ್ದ ಈತ, ರೆಸ್ಟೋರೆಂಟ್ನಲ್ಲಿ ಬಾಂಬ್ ಇಡಲಾಗಿದ್ದು ಶೀಘ್ರದಲ್ಲೇ ಸ್ಫೋಟವಾಗಲಿದೆ ಎಂದು ಬೆದರಿಸಿದ್ದ. ಆತಂಕಗೊಂಡ ಮಾಲೀಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದು ರೆಸ್ಟೋರೆಂಟ್ ಪೂರ್ತಿ ಶೋಧ ಕಾರ್ಯ ನಡೆಸಿದಾಗ ಇದೊಂದು ಹುಸಿ ಬಾಂಬ್ ಕರೆ ಎಂದು ಗೊತ್ತಾಗಿತ್ತು.
ಬಾಂಬ್ ಬೆದರಿಕೆ ಕರೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದಾಗ, ಬೆದರಿಕೆ ಹಾಕಿದವ ಇಂದಿರಾನಗರದ ರೆಸ್ಟೋರೆಂಟ್ನ ಬ್ರ್ಯಾಂಚ್ನಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ನೌಕರ ಎಂದು ತಿಳಿದುಬಂದಿದೆ.