ಕರ್ನಾಟಕ

karnataka

ETV Bharat / state

ಪ್ರತಾಪ್ ಸಿಂಹ ಮೇಲೆ ಆಧಾರರಹಿತ ಆರೋಪ: ಲಕ್ಷ್ಮಣ್ ವಿರುದ್ಧ ಮೊಕದ್ದಮೆ ದಾಖಲಿಸಲು ಕೋರ್ಟ್​​ ನಿರ್ದೇಶನ - M Laxman

ಸಂಸದ ಪ್ರತಾಪ್​ ಸಿಂಹ ವಿರುದ್ಧ ಆಧಾರರಹಿತ ಆರೋಪ ಹಿನ್ನೆಲೆಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಕೋರ್ಟ್​ ಹೇಳಿದೆ.

court
ಪ್ರತಾಪ್ ಸಿಂಹ

By ETV Bharat Karnataka Team

Published : Mar 2, 2024, 6:33 AM IST

ಬೆಂಗಳೂರು : ಸಂಸದ ಪ್ರತಾಪ್‌ ಸಿಂಹ ವಿರುದ್ಧ ಆಧಾರರಹಿತ ಆರೋಪ ಮಾಡಿದ ಸಂಬಂಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಮಾನನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಂ.ಲಕ್ಷ್ಮಣ್‌ ವಿರುದ್ಧ ಸಂಸದ ಪ್ರತಾಪ್ ಸಿಂಹ ದಾಖಲಿಸಿರುವ ಖಾಸಗಿ ದೂರನ್ನು ನ್ಯಾಯಾಲಯವು ವಿಚಾರಣೆ ನಡೆಸಿತು. ಪ್ರತಾಪ್‌ ಸಿಂಹ ಅವರಿಗೆ ಮಾನನಷ್ಟ ಉಂಟು ಮಾಡಿದ ಆರೋಪ ಸಂಬಂಧ ಲಕ್ಷ್ಮಣ್‌ ವಿರುದ್ಧ ಸೂಕ್ತ ಪುರಾವೆಗಳು ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಾಗಾಗಿ, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಪ್ರಕ್ರಿಯೆ ಆರಂಭಿಸುವುದು ಸೂಕ್ತವೆನಿಸುತ್ತಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಅಭಿಪ್ರಾಯಟ್ಟಿದೆ.

ಅಲ್ಲದೆ, ಐಪಿಸಿ ಸೆಕ್ಷನ್ 499, 500 ಮತ್ತು 503ರ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಕಚೇರಿಗೆ (ಕೋರ್ಟ್‌ ರಿಜಿಸ್ಟ್ರಿಗೆ) ನಿರ್ದೇಶಿಸಿರುವ ನ್ಯಾಯಾಲಯ, ಲಕ್ಷ್ಮಣ್‌ ಅವರಿಗೆ ನೋಟಿಸ್‌ ಜಾರಿ ಮಾಡಿದೆ. ಜೂನ್​​ 12ರೊಳಗೆ ಲಿಖಿತ ಉತ್ತರ ನೀಡಬೇಕು ಎಂದು ಸೂಚಿಸಿದೆ.

ಪ್ರಕರಣದ ಹಿನ್ನೆಲೆ : ''ಸಂಸದ ಪ್ರತಾಪ್​ ಸಿಂಹ ಅವರುಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣ ಸಮಯದಲ್ಲಿ 60 ಕೋಟಿ ರೂ. ಹಣವನ್ನು ಅಕ್ರಮವಾಗಿ ಸಂಪಾದನೆ ಮಾಡಿ, ಕೊಡಗಿನ ಬೇನಾಮಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. ಈ ಕುರಿತು ಐಟಿ, ಇಡಿಗೆ ದೂರು ಸಲ್ಲಿಸುತ್ತೇನೆ ಎಂದು ಲಕ್ಷ್ಮಣ್‌ ಅವರು 2023 ರ ಜೂನ್​​ 16 ಹಾಗೂ 20ರಂದು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದಾರೆ. 2023ರ ಡಿಸೆಂಬರ್​​​ 13ರಂದು ಸಂಸತ್‌ ಲೋಕಸಭೆಯಲ್ಲಿ ಮೈಸೂರಿನ ಮನೋರಂಜನ್‌ ಮತ್ತು ಆತನ ಸ್ನೇಹಿತ ಸಾಗರ್‌ ಶಾ ಅವರು ಹೊಗೆ ಬಾಂಬ್‌ ಸ್ಫೋಟಿಸಿದ್ದು, ಆ ಕೃತ್ಯ ಎಸಗಲು ಅವರಿಗೆ ಪ್ರತಾಪ್​ ಸಿಂಹ ತರಬೇತಿ ನೀಡಿರುವ ಬಗ್ಗೆ 5 ನಿಮಿಷದ ವಿಡಿಯೋ ತಮ್ಮ ಬಳಿ ಇದೆ. ಅದನ್ನು ಮಾಧ್ಯಮದವರು ಹಾಗೂ ಪೊಲೀಸರಿಗೆ ನೀಡುತ್ತೇನೆಂದು ಲಕ್ಷ್ಮಣ್‌ ಆರೋಪ ಮಾಡಿದ್ದರು'' ಎಂದು ದೂರಿನಲ್ಲಿ ಪ್ರತಾಪ್‌ ಸಿಂಹ ತಿಳಿಸಿದ್ದರು.

''ಆದರೆ ಲಕ್ಷ್ಮಣ್‌ ಅವರು ಪೆನ್‌ ಡ್ರೈವ್‌ ಅನ್ನು ಪೊಲೀಸರಿಗಾಗಲಿ ಅಥವಾ ಮಾಧ್ಯಮದವರಿಗೆ ನೀಡಿಲ್ಲ. ಮಾಧ್ಯಮದವರು ಕೇಳಿದಾಗ ನಿಮಗೆ ನೀಡುವುದಿಲ್ಲ, ಪೊಲೀಸರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಪ್ರತಿ ಪತ್ರಿಕಾಗೋಷ್ಟಿಯಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸುವ ಮತ್ತು ಜನರಲ್ಲಿ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಾ ತೇಜೋವಧೆ ಮಾಡುತ್ತಿದ್ದಾರೆ. ಹಾಗಾಗಿ, ಲಕ್ಷ್ಮಣ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು'' ಎಂದು ಪ್ರತಾಪ್‌ ಸಿಂಹ ಕೋರಿದ್ದರು.

ಇದನ್ನೂ ಓದಿ:ಸಮಾಜ ವಿರೋಧಿ ಚಟುವಟಿಕೆಗಳಿಂದ ದೇಶವನ್ನು ರಕ್ಷಿಸುವುದು ನ್ಯಾಯಾಲಯಗಳ ಕರ್ತವ್ಯ: ಹೈಕೋರ್ಟ್

ABOUT THE AUTHOR

...view details