ಬೆಂಗಳೂರು: ಐತಿಹಾಸಿಕ ಪಾಮುಖ್ಯತೆ ಪಡೆದಿರುವ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪ್ರದೇಶವು ಸಾಕಷ್ಟು ವರ್ಷಗಳಿಂದ ವಿಶಿಷ್ಟ ಗಿಡ- ಮರಗಳ ಆಗರವಾಗಿದೆ. ಈಗ ಮತ್ತೆ ಹೊಸದಾಗಿ ಅಲಂಕಾರಿಕ ಗಿಡ- ಮರಗಳನ್ನು ನೆಡುವ ಜೊತೆಗೆ ಸವಿಸ್ತಾರವಾದ ಪರಿಚಯ ಫಲಕಗಳನ್ನು ಹಾಕಿ ಪ್ರಾಕೃತಿಕ ಗತ ವೈಭವವನ್ನು ಮತ್ತೆ ವಿದ್ಯಾರ್ಥಿಗಳಿಗೆ ಮತ್ತು ಜನರಿಗೆ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯ ಮುಂದಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಉದ್ಯಾನವನಗಳನ್ನು ಪುನರ್‌ಸ್ಥಾಪನೆ ಮಾಡಲು ಮುಂದಾಗಲಾಗಿದೆ. ಹಲವು ಬಗೆಯ ಗಿಡ ಮತ್ತು ಮರಗಳ ಪ್ರಾಕೃತಿಕ ಸೌಂದರ್ಯವನ್ನು ಸವಿಯುವ ಜೊತೆಗೆ ಹುಲ್ಲುಗಾವಲಿನ ಮೈದಾನದಲ್ಲಿ ನೂತನ ಬೆಂಚ್‌ಗಳನ್ನು ಕೂಡ ಅಭಿವೃದ್ಧಿ ಮಾಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಮತ್ತು ದೇಶ ವಿದೇಶಗಳಿಂದ ತಂದಿರುವ ಗಿಡಗಳನ್ನು ನೆಟ್ಟು ಹಳೆಯ ಮರ-ಗಿಡಗಳಿಗೆ ಪುನರುಜ್ಜೀವನಗೊಳಿಸುವ ಕೆಲಸ ಭರದಿಂದ ಸಾಗಿದೆ.
ಎಸ್‌ಟಿಪಿ ಪ್ಲಾಂಟ್‌ಗಳನ್ನು ಕೂಡ ನೂತನವಾಗಿ ಅಳವಡಿಸಲಾಗಿದೆ. ರೈನ್ ವಾಟರ್ ರಿಚಾರ್ಜ್ ಪಿಟ್ಸ್‌ಗಳನ್ನು ಕೂಡ ನಿರ್ಮಾಣ ಮಾಡಲಾಗಿದೆ. ಇವುಗಳಿಂದ ಅಂತರ್ಜಲ ವೃದ್ಧಿಗೆ ಕೂಡ ಕೊಡುಗೆ ನೀಡಲು ವಿಶ್ವವಿದ್ಯಾಲಯ ಪಣ ತೊಟ್ಟಿದೆ. ಇದರ ಜೊತೆಗೆ ವಿಶೇಷವಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಿರುವ ಉದ್ಯಾನವನವೂ ಸೇರಿದಂತೆ ವಿಶ್ವವಿದ್ಯಾಲಯದಲ್ಲಿರುವ ಗಿಡ ಮರಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆಯಲ್ಲಿ 100 ವರ್ಷಗಳಷ್ಟು ಹಳೆಯ ಪಾಲ್ಮ್ ಮರಗಳು, 150 ವರ್ಷದ ಆಲದ ಮರಗಳು ವಿಶ್ವವಿದ್ಯಾಲಯದ ಆವರಣದಲ್ಲಿದ್ದು, ಅವನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ.