ಕರ್ನಾಟಕ

karnataka

ETV Bharat / state

ಸುಗ್ಗಿ ಹಬ್ಬಕ್ಕೆ ಸಿಲಿಕಾನ್ ಸಿಟಿ ಸನ್ನದ್ಧ: ವರ್ಷದ ಮೊದಲ ಹಬ್ಬಕ್ಕೆ ಅಗತ್ಯ ವಸ್ತುಗಳ ಖರೀದಿ ಬಲು ಜೋರು - SANKRANTI FESTIVAL PURCHASE

ಸಂಕ್ರಾಂತಿ ಹಬ್ಬಕ್ಕೆ ಇಡೀ ನಾಡೇ ತಯಾರಾಗುತ್ತಿದ್ದು, ಬೆಂಗಳೂರು ನಗರದ ಜನರು ಹಬ್ಬಕ್ಕಾಗಿ ಅಗತ್ಯ ವಸ್ತುಗಳ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

Sankranti Festival Purchase
ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

By ETV Bharat Karnataka Team

Published : Jan 13, 2025, 6:57 PM IST

Updated : Jan 13, 2025, 7:02 PM IST

ಬೆಂಗಳೂರು: ಸುಗ್ಗಿಯ ಹಬ್ಬಕ್ಕೆ ಸಿಲಿಕಾನ್ ಸಿಟಿ ಸಿದ್ಧವಾಗುತ್ತಿದ್ದು, ಜನರು ಮಾರುಕಟ್ಟೆಗೆ ತೆರಳಿ ಹಬ್ಬಕ್ಕೆ ಬೇಕಾಗಿರುವ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಹೂವು, ಹಣ್ಣು, ಕಬ್ಬು, ಎಳ್ಳು, ಬೆಲ್ಲ, ತೆಂಗಿನ ಕಾಯಿಯಂತಹ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ.

ನಗರದ ಕೆ.ಆ‌ರ್. ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಬಸವನಗುಡಿ, ರಾಜಾಜಿನಗರ, ವಿಜಯನಗರದ ಮೂಡಲಪಾಳ್ಯ, ಗಾಂಧಿಬಜಾರ್ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದು, ಎಲ್ಲಿ ಮಾರುಕಟ್ಟೆಗಳಲ್ಲಿ ಕಣ್ಣು ಹಾಯಿಸಿದಷ್ಟೂ ಜನರೇ ಕಂಡು ಬರುತ್ತಿದ್ದಾರೆ. ಹಬ್ಬದ ವಸ್ತುಗಳ ಖರೀದಿಯಲ್ಲಿ ಬೆಂಗಳೂರಿಗರು ಬ್ಯುಸಿಯಾಗಿದ್ದಾರೆ.

ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

ರಾಜ್ಯದ ವಿವಿಧ ಭಾಗಗಳಿಂದ ರೈತರು ಹಾಗೂ ವ್ಯಾಪಾರಿಗಳು ತಮ್ಮ ವಾಹನಗಳ ಮೂಲಕ ಕಬ್ಬು ತಂದು ಮಾರಾಟ ಮಾಡುತ್ತಿದ್ದಾರೆ. ಉತ್ತಮ ಬೇಡಿಕೆ ಇರುವುದಾಗಿ ಹೇಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಕಬ್ಬಿಗೆ ಬೇಡಿಕೆ ಹೆಚ್ಚಾಗಿದೆ. ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಕಬ್ಬಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ನಿರೀಕ್ಷೆಯಂತೆ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬಿನ ಬೆಲೆ ಗಗನಕ್ಕೇರಿದೆ.

ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

ಸಂಕ್ರಾಂತಿ ಹಬ್ಬದಲ್ಲಿ ಕಪ್ಪು ಕಬ್ಬು ಬಳಸಲಾಗುತ್ತದೆ. ಕೆಲವು ರೈತರು ತೋಟದಲ್ಲೇ ವ್ಯಾಪಾರಿಗಳಿಗೆ ಕಬ್ಬು ಮಾರಾಟ ಮಾಡಿದ್ದರೆ, ಇನ್ನೂ ರೈತರು ತಾವೇ ಮಾರುಕಟ್ಟೆಗೆ ತಂದು ಮಾರುತ್ತಿದ್ದಾರೆ. ಕಳೆದ ಬಾರಿ 10 ಕಬ್ಬುಗಳ ಒಂದು ಕಟ್ಟು 400 ರೂಪಾಯಿ ಇತ್ತು. ಆದರೆ, ಈ ಬಾರಿ 500 ರೂಪಾಯಿಗೆ ತಲುಪಿದೆ ಎಂದು ರೈತರು ವಿವರಿಸಿದರು.

ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

ಇನ್ನು ಎಲ್ಲರೂ ಎಳ್ಳು- ಬೆಲ್ಲ, ಅವರೇಕಾಯಿ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಅವರೆಕಾಯಿ ಸೊಗಡಿನ ಘಮಲು ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಬಾರಿ ಎಳ್ಳು- ಬೆಲ್ಲದ ಪ್ಯಾಕೆಟ್ ಮಿಶ್ರಣದ ದರ ಕೂಡ ಏರಿಕೆಯಾಗಿದೆ. ಹೆಚ್ಚಾಗಿ ಜನ ಮನೆಯಲ್ಲಿ ತಯಾರಿಸಿದ ಮಿಶ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.

ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

ಮಾರುಕಟ್ಟೆಗಳಿಗೆ ಎಳ್ಳು ಬೆಲ್ಲ ತುಂಬಿ ಹಂಚುವ ಅಲಂಕಾರಿಕ ಪುಟ್ಟ-ಪುಟ್ಟ ಡಿಸೈನರ್ ಗಿಫ್ಟ್ ಬಾಕ್ಸ್​ಗಳು ಲಗ್ಗೆಯಿಟ್ಟಿದ್ದು, ಗ್ರಾಹಕರನ್ನು ಸೆಳೆಯುತ್ತಿದೆ. ಬಿದಿರಿನಿಂದ ಮಾಡಿರುವ ಆಕರ್ಷಕ ಅಲಂಕಾರಿಕ ಬುಟ್ಟಿಗಳು ಕೂಡ ಲಭ್ಯವಿದ್ದು, ಹೃದಯಾಕಾರ, ಹಣ್ಣಿನ ಆಕಾರ, ಕಾರ್ಟೂನ್ ಕ್ಯಾರೆಕ್ಟರ್ ಹೊಂದಿರುವ ಮಿನಿ ಬಾಕ್ಸ್, ಮ್ಯಾಜಿಕಲ್ ಬಾಕ್ಸ್ ಸೇರಿದಂತೆ ಹಲವಾರು ಬಗೆಯ ಬಾಕ್ಸ್‌ಗಳು ಹಾಗೂ ಬುಟ್ಟಿಗಳನ್ನು ಹೆಚ್ಚು ಕೊಳ್ಳುತ್ತಿದ್ದಾರೆ.

ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)
ಸಂಕ್ರಾಂತಿಗೆ ಖರೀದಿಯಲ್ಲಿ ತೊಡಗಿರುವ ಬೆಂಗಳೂರು ಜನ (ETV Bharat)

ಸಂಕ್ರಾತಿ ವಸ್ತುಗಳ ದರ:

ವಸ್ತುಗಳು ದರ
ಎಳ್ಳು ಬೆಲ್ಲ 300- 360 ರೂ.
ಹಸಿ ಕಡಲೇಕಾಯಿ 100 ರೂ.
ಅವರೇಕಾಯಿ 120- 140 ರೂ.
ಗೆಣಸು 50 ರೂ.
ಕಬ್ಬು (ಒಂದು ಜತೆ) 50 ರೂ.

ಹೂವಿನ ದರ:

ಹೂ ದರ (ಕೆಜಿಗೆ)
ಮಲ್ಲಿಗೆ 250 ರೂ.
ಕಾಕಡ 230 ರೂ.
ಗುಲಾಬಿ 160 ರೂ.
ಸೇವಂತಿಗೆ 150-170 ರೂ.
ಚೆಂಡು ಹೂವು 110 ರೂ.

ಇದನ್ನೂ ಓದಿ:ಸಂಕ್ರಾಂತಿ ಹಬ್ಬ: ವಾಯವ್ಯ ಸಾರಿಗೆಯಿಂದ ಹೆಚ್ಚುವರಿ ವಿಶೇಷ ಬಸ್‌ಗಳ​ ವ್ಯವಸ್ಥೆ

Last Updated : Jan 13, 2025, 7:02 PM IST

ABOUT THE AUTHOR

...view details