ಕರ್ನಾಟಕ

karnataka

ETV Bharat / state

ಕೊನೇ ಕ್ಷಣದಲ್ಲಿ ಅಚ್ಚರಿಯ ಫಲಿತಾಂಶ: ಸತತ ಹಿನ್ನಡೆಯಲಿದ್ದ ಪಿ.ಸಿ.ಮೋಹನ್​ಗೆ ಕೊನೆಗೂ ಗೆಲುವು - bengaluru Central Lok sabha

ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಸತತ ಹಿನ್ನಡೆಯಲ್ಲಿದ್ದ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್​ ಗೆಲುವಿನ ನಗೆ ಬೀರಿದ್ದಾರೆ.

MP P C Mohan
ಸಂಸದ ಪಿ.ಸಿ.ಮೋಹನ್​ (ETV Bharat)

By ETV Bharat Karnataka Team

Published : Jun 4, 2024, 9:28 AM IST

Updated : Jun 4, 2024, 5:11 PM IST

ಪಿ.ಸಿ.ಮೋಹನ್​ (ETV Bharat)

ಬೆಂಗಳೂರು:ಮಿನಿ ಭಾರತ ಎಂದೇ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್​ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಮನ್ಸೂರ್​ ಅಲಿ ಖಾನ್​ ಅವರಿಗೆ ಸೋಲಾಗಿದೆ. ಸತತ ಹಿನ್ನಡೆಯಲ್ಲಿದ್ದ ಪಿ.ಸಿ.ಮೋಹನ್​ ಕೊನೇ ಸುತ್ತುಗಳಲ್ಲಿ ಮುನ್ನಡೆ ಕಂಡು, 32,707 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ.

ಸತತ ಹಿನ್ನಡೆಯಲಿದ್ದ ಪಿ.ಸಿ.ಮೋಹನ್​ ಅವರಿಗೆ ಕೊನೇ ಕ್ಷಣದಲ್ಲಿ ಮಹದೇವಪುರ ವಿಧಾನಸಭಾ ಕ್ಷೇತ್ರ ಕೈಹಿಡಿಯಿತು. ಮಹದೇವಪುರ ಕ್ಷೇತ್ರದಲ್ಲಿ ಸುಮಾರು 1.12 ಲಕ್ಷ ಮತಗಳಿಂದ ಮುನ್ನಡೆ ಪಡೆದು, ಗೆಲುವು ಸಾಧಿಸಿದ್ದಾರೆ.

ಬೆಂಗಳೂರು ಕೇಂದ್ರ ಕ್ಷೇತ್ರ (ETV Bharat)

ಗೆಲುವಿನ ಖುಷಿಯಲ್ಲಿರುವ ಪಿ.ಸಿ.ಮೋಹನ್​ ಮಾಧ್ಯಮಗಳ ಜೊತೆಗೆ ಮಾತನಾಡಿ, "ನನ್ನ ಕ್ಷೇತ್ರದ ಜನರು ನಾಲ್ಕನೇ ಬಾರಿಗೆ ನನಗೆ ಆಶೀರ್ವಾದ ಮಾಡಿದ್ದಾರೆ. ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದೆ. ನಾನು ಅಂದುಕೊಂಡದ್ದಕ್ಕಿಂತ 20 ಸಾವಿರ ಮತಗಳು ಕಡಿಮೆ ಬಂದಿವೆ. ಆದರೂ ನಾನು 40 ಸಾವಿರಕ್ಕಿಂತಲೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದೇನೆ. ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದಗಳು. ಎರಡೆರಡು ಸಾವಿರ ಹಾಕಿ ಜನರಿಗೆ ಟೋಪಿ ಹಾಕಿದ್ರು. ಅವರಿಗೆ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ. ಎಲ್ಲ ಬಿಜೆಪಿ ನಾಯಕರಿಗೂ ಧನ್ಯವಾದಗಳು. ಕೊಟ್ಟಿರುವ ಭರವಸೆಗಳನ್ನು ಈಡೇರಿಸುತ್ತೇವೆ" ಎಂದು ಹೇಳಿದರು.

ಈ ಬಾರಿ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಹಾಲಿ ಸಂಸದ ಬಿಜೆಪಿಯ ಪಿ.ಸಿ. ಮೋಹನ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಹೊಸ ಮುಖ ಮನ್ಸೂರ್ ಅಲಿ ಖಾನ್ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿತ್ತು.

ಭರ್ಜರಿ ಪ್ರಚಾರ: ಬಿಜೆಪಿ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಮತ ಬ್ಯಾಂಕ್ ಹೊಂದಿರುವ ಪ್ರದೇಶಗಳನ್ನು ಗುರಿಯಾಗಿಸಿ ಇಬ್ಬರು ಅಭ್ಯರ್ಥಿಗಳು ಮತಬೇಟೆ ನಡೆಸಿದ್ದರು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ಪರವಾಗಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ, ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ, ತಮಿಳು ನಟ ಶರತ್ ಭರ್ಜರಿ ಪ್ರಚಾರ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಸ್ವತಃ ಪ್ರಧಾನಿ ಮೋದಿ ಬಹಿರಂಗ ಸಭೆ ನಡೆಸುವ ಮೂಲಕ ಪಿ.ಸಿ. ಮೋಹನ್ ತಮ್ಮ ಕ್ಷೇತ್ರದಲ್ಲಿ ಮೋದಿ ಅಲೆ ಸೃಷ್ಟಿಸಲು ಯತ್ನಿಸಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ‌ ಖಾನ್ ಕೂಡ ಕ್ಷೇತ್ರದ ತುಂಬೆಲ್ಲ ಬಿರುಸಿನ ಮತಪ್ರಚಾರ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಭರ್ಜರಿ ಕ್ಯಾಂಪೇನ್​ ಮಾಡಿದ್ದರು. ಅಲ್ಪಸಂಖ್ಯಾತರ ಮತ ಬ್ಯಾಂಕ್​ಗಳನ್ನು ಗುರಿಯಾಗಿಸಿ ಮನ್ಸೂರ್ ಅಲಿ ಖಾನ್ ಹೆಚ್ಚಿನ ಪ್ರಚಾರ ನಡೆಸಿದ್ದರು.

ಮತದಾರರು: 8 ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ ಏ.26 ರಂದು ನಡೆದ ಚುನಾವಣೆಯಲ್ಲಿ ಶೇ. 54.19 ಮತದಾನ ದಾಖಲಾಗಿತ್ತು. ಈ ಕ್ಷೇತ್ರದಲ್ಲಿ ಒಟ್ಟು 23,89,761 ಮತದಾರರಿದ್ದಾರೆ.

ಬಿಜೆಪಿ ಭದ್ರಕೋಟೆ: ಬೆಂಗಳೂರು ಕೇಂದ್ರ ಸಿಲಿಕಾನ್​ ಸಿಟಿಯ ಪ್ರಮುಖ ಕ್ಷೇತ್ರ. 2008ರಲ್ಲಿ ರಚಿತವಾದ ಈ ಕ್ಷೇತ್ರ ಸದ್ಯ ಬಿಜೆಪಿಯ ಭದ್ರ ಕೋಟೆಯಾಗಿದೆ. ಸತತ ಮೂರು ಬಾರಿ ಗೆಲುವು ಸಾಧಿಸುತ್ತಾ ಬಂದಿದ್ದ ಪಿ.ಸಿ. ಮೋಹನ್ ಈ ಸಲವೂ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹೊಸ ಮುಖವಾಗಿದ್ದು, ಶಿಕ್ಷಣ ತಜ್ಞರಾಗಿರುವ ಅವರು ಬಿಜೆಪಿ ಭದ್ರಕೋಟೆ ಛಿದ್ರಗೊಳಿಸಲು ಕಸರತ್ತು ನಡೆಸುತ್ತಿದ್ದರು. ಆದರೆ ಫಲಿತಾಂಶ ಅವರ ಪ್ರಯತ್ನಕ್ಕೆ ಪೂರ್ಣ ಫಲ ನೀಡಿಲ್ಲ.

ಇದನ್ನೂ ಓದಿ:ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್​​ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024

Last Updated : Jun 4, 2024, 5:11 PM IST

ABOUT THE AUTHOR

...view details