ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವವನ್ನು ಮಾರ್ಚ್ 4 ರಂದು ಜಿಕೆವಿಕೆ ಆವರಣದಲ್ಲಿ ಹಮ್ಮಿಕೊಂಡಿರುವುದಾಗಿ ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್ ಮಾಹಿತಿ ನೀಡಿದರು. ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಅವಧಿಯಲ್ಲಿ 1,244 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡುತ್ತಿರುವುದಾಗಿ ತಿಳಿಸಿದರು. ಅಲ್ಲದೆ, ಡಾಕ್ಟರ್ ಆಫ್ ಫಿಲಾಸಫಿಯಲ್ಲಿ 29 ಚಿನ್ನದ ಪದಕ, ಮಾಸ್ಟರ್ ಪದವಿಯಲ್ಲಿ 39 ಚಿನ್ನದ ಪದಕ, ಸ್ನಾತಕ ಪದವಿಯಲ್ಲಿ 59 ಚಿನ್ನದ ಪದಕ ಪ್ರದಾನ ಮಾಡುತ್ತಿರುವುದಾಗಿ ಹೇಳಿದರು.
ವಿಶ್ವವಿದ್ಯಾಲಯದಿಂದ 134 ಹಾಗೂ ದಾನಿಗಳಿಂದ 22 ಚಿನ್ನದ ಪದಕಗಳು ಸೇರಿ ಒಟ್ಟು 154 ಪದಕಗಳನ್ನು ನೀಡಲಾಗುತ್ತಿದೆ. ಇಡೀ ವಿವಿ ಅಧೀನದ ಕಾಲೇಜುಗಳಲ್ಲಿ 49 ವಿದ್ಯಾರ್ಥಿನಿಯರು ಹಾಗೂ 14 ವಿದ್ಯಾರ್ಥಿಗಳು ಸೇರಿ ಒಟ್ಟು 63 ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಅವರು ವಿವರಿಸಿದರು.
ಗೌರವ ಡಾಕ್ಟರೇಟ್:600 ಎಕರೆ ಜಮೀನಿನಲ್ಲಿ ಪಶು ಸಂಗೋಪನೆ ಜೊತೆಗೆ ವೈಜ್ಞಾನಿಕವಾಗಿ ಕೃಷಿ ಕಾರ್ಯದಲ್ಲಿ ತೊಡಗಿರುವ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದ ಎಂ.ಸಿ. ರಂಗಸ್ವಾಮಿ ಅವರಿಗೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ವಿವಿಯ ಶಿಕ್ಷಣ ನಿರ್ದೇಶಕ ಡಾ.ಕೆ.ಸಿ. ನಾರಾಯಣಸ್ವಾಮಿ, ಕುಲಸಚಿವ ಡಾ. ಬಸವೇಗೌಡ, ವಿಸ್ತರಣಾ ನಿರ್ದೇಶಕರಾದ ಡಾ.ವಿ.ಎಲ್. ಮಧುಪ್ರಸಾದ್ ಉಪಸ್ಥಿತರಿದ್ದರು.