ಬೆಂಗಳೂರು: ನಗರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸ್ ಸರ್ವಿಸ್ ಶೆಡ್ನಲ್ಲಿ ಕೆಲಸ ಮಾಡುತಿದ್ದ ಸುರೇಶ್ ಬಂಧಿತ ಆರೋಪಿ.
ನವೆಂಬರ್ 8ರಂದು ರಾತ್ರಿ ಬಾಗಲೂರು ವ್ಯಾಪ್ತಿಯ ಸಿಂಗಹಳ್ಳಿ ಗ್ರಾಮದ ಬಳಿಯ ಶೆಡ್ನಲ್ಲಿ ನಾಗೇಶ್ (55) ಮತ್ತು ಮಂಜುನಾಥ್ (50) ಎಂಬಿಬ್ಬರನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಹತ್ಯೆ ಮಾಡಲಾಗಿತ್ತು.
ಡಿಸಿಪಿ ಮಾಹಿತಿ (ETV Bharat) ಹತ್ಯೆಯಾದ ನಾಗೇಶ್, ಮಂಜುನಾಥ್ ಹಾಗೂ ಆರೋಪಿ ಸುರೇಶ್ ಬಸ್ ಸರ್ವಿಸ್ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿ ಸುರೇಶನನ್ನು ನಿಂದಿಸುತ್ತಿದ್ದ ನಾಗೇಶ್ ಮತ್ತು ಮಂಜುನಾಥ್ ಕುಡಿದ ಮತ್ತಿನಲ್ಲಿ, ''ನೀನೊಬ್ಬ ಕಳ್ಳ, ನಿನ್ನ ಮೇಲೆ ಪ್ರಕರಣಗಳಿವೆ'' ಎಂದು ಹೀಯಾಳಿಸುತ್ತಿದ್ದರು. ಶುಕ್ರವಾರ ರಾತ್ರಿಯೂ ಸಹ ಕುಡಿದ ಮತ್ತಿನಲ್ಲಿ ನಿಂದಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆತ ಕಬ್ಬಿಣದ ಸಲಾಕೆಯಿಂದ ಇಬ್ಬರ ತಲೆಗೆ ಹೊಡೆದು ಹತ್ಯೆಗೈದಿದ್ದ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶ್ಯೂರಿಟಿಯಿಂದ ಹೊರ ಬಂದಿದ್ದ ಆರೋಪಿ:ಬಂಧಿತ ಸುರೇಶ್ ಈ ಹಿಂದೆಯೂ ಡಬಲ್ ಮರ್ಡರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲು ಸೇರಿದ್ದ. ಸಾಲದೆಂಬಂತೆ ಆತನ ಮೇಲೆ ಒಂದು ಅತ್ಯಾಚಾರ ಪ್ರಕರಣ ಸಹ ಇತ್ತು.ಅಪರಾಧಿಯಾಗಿ ಜೈಲಿನಲ್ಲಿ ಹತ್ತು ವರ್ಷಗಳ ಶಿಕ್ಷೆ ಅನುಭವಿಸಿದ್ದ ಸುರೇಶ್'ಗೆ ಬಿಡುಗಡೆ ಸಂದರ್ಭದಲ್ಲಿ ಶ್ಯೂರಿಟಿ ಹಣ ನೀಡಲು ಯಾರೂ ಸಹ ಮುಂದೆ ಬಂದಿರಲಿಲ್ಲ. ಅದೇ ಸಮಯದಲ್ಲಿ ನಟ ದುನಿಯಾ ವಿಜಯ್ ಒಂದಷ್ಟು ಜನ ಕೈದಿಗಳ ಬಿಡುಗಡೆಗೆ ಶ್ಯೂರಿಟಿ ನೀಡಿದ್ದರು.
ಆಗ ಬಿಡುಗಡೆಯಾದ ಕೈದಿಗಳಲ್ಲಿ ಒಬ್ಬನಾಗಿದ್ದ ಸುರೇಶ್, ನಂತರದ ದಿನಗಳಲ್ಲಿ ಕೆ.ಆರ್ ಮಾರುಕಟ್ಟಯಲ್ಲಿ ಕೊತ್ತಂಬರಿ ಸೊಪ್ಪಿನ ವ್ಯಾಪಾರ ಮಾಡಿಕೊಂಡಿದ್ದ. ನಂತರದ ದಿನಗಳಲ್ಲಿ ಸುರೇಶ್ ಸಂಬಂಧಿಯೊಬ್ಬರು ಬಸ್ ಶೆಡ್ನಲ್ಲಿ ಕೆಲಸ ಕೊಡಿಸಿದ್ದರು. ಡಬಲ್ ಮರ್ಡರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆರೋಪಿ ನಾಪತ್ತೆಯಾಗಿರುವುದು ಗೊತ್ತಾಗಿತ್ತು. ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಹತ್ಯೆಯ ಹಿಂದಿನ ಕಾರಣ ಬಾಯ್ಬಿಟ್ಟಿದ್ದಾನೆ ಎಂದು ಬಾಗಲೂರು ಪೊಲೀಸರು ತಿಳಿಸಿದ್ದಾರೆ.
ಆದರೆ ಮತ್ತೊಮ್ಮೆ ಡಬಲ್ ಮರ್ಡರ್ ಪ್ರಕರಣದ ಆರೋಪಿಯಾಗಿರುವ ಸುರೇಶ್ನನ್ನು ಸದ್ಯ ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಪುತ್ರಿಯನ್ನು ವಿದೇಶಕ್ಕೆ ಕಳುಹಿಸಿದ ತಂದೆ: ಗೆಳತಿಯ ದೂರ ಮಾಡಿದ ಕೋಪಕ್ಕೆ ಯುವಕನಿಂದ ಗುಂಡಿನ ದಾಳಿ