ಬೆಂಗಳೂರು:ಜಿಲ್ಲೆಯಲ್ಲಿ ಮತದಾನ ಮಾಡಲು ಬಂದ ಮಹಿಳೆಯೊಬ್ಬರಿಗೆ ಹೃದಯ ಸ್ತಂಭನವಾಗಿದ್ದು, ಅದೇ ಮತಗಟ್ಟೆಗೆ ಮತದಾನ ಮಾಡಲು ಆಗಮಿಸಿದ್ದ ವೈದ್ಯರಿಂದ ಮಹಿಳೆಯ ಜೀವ ಉಳಿದಿದೆ. ಜೆ.ಪಿ. ನಗರ 8ನೇ ಹಂತದ ಜಂಬೂ ಸವಾರಿ ದಿಣ್ಣೆ ಬಳಿ ಘಟನೆ ನಡೆದಿದೆ.
ಸುಮಾರು 50 ವರ್ಷ ಆಸುಪಾಸಿನ ಮಹಿಳೆ ಮತದಾನ ಮಾಡಲು ಬಂದಿದ್ದು, ನೀರು ಕುಡಿಯಲು ಹೋಗಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು. ತಕ್ಷಣ ಮತದಾನ ಮಾಡಲು ಅದೇ ಮತಗಟ್ಟೆಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದ ನಾರಾಯಣ ಆರೋಗ್ಯ ಕೇಂದ್ರದ ಮೂತ್ರಪಿಂಡ ತಜ್ಞ ಡಾ. ಗಣೇಶ್ ಶ್ರೀನಿವಾಸ ಪ್ರಸಾದ್ ಹಾಗೂ ಇನ್ನೊಬ್ಬ ಮತದಾರರು ರಕ್ಷಿಸಲು ಹೋಗಿದ್ದಾರೆ.
ವೈದ್ಯ ಗಣೇಶ್ ಆರೋಗ್ಯ ಪರಿಶೀಲಿಸಿದಾಗ ನಾಡಿಮಿಡಿತ ಏರುಪೇರಾಗಿದ್ದನ್ನು ಗಮನಿಸಿದರು. ದೇಹ ಕೂಡ ಯಾವುದೇ ಪ್ರತಿಕ್ರಿಯೆ ತೋರಿಸಲಿಲ್ಲ. ತಕ್ಷಣ ವೈದ್ಯರು CPR ಮಾಡಿದ್ದು, ಆರೋಗ್ಯ ಸುಧಾರಿಸಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಧಾವಿಸಿ ಜ್ಯೂಸ್ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡ ಡಾ. ಗಣೇಶ್ ಶ್ರೀನಿವಾಸ್, 'ಕುಸಿದು ಬೀಳುತ್ತಿದ್ದ ಮಹಿಳೆಯನ್ನು ಕಂಡು ನೆರವಿಗೆ ಧಾವಿಸಿದೆ. ನಾನು ಅವಳ ನಾಡಿಮಿಡಿತವನ್ನು ಪರಿಶೀಲಿಸಿದೆ, ಅದು ತುಂಬಾ ಕಡಿಮೆಯಾಗಿದೆ ಅನ್ನೋದು ಕಂಡುಬಂದಿತು. ಕಣ್ಣುಗಳನ್ನು ಮೇಲಕ್ಕೆತ್ತಿದ್ದರು. ಅವರ ದೇಹವು ಯಾವುದೇ ಪ್ರತಿಕ್ರಿಯೆಯನ್ನು ತೋರಿಸಲಿಲ್ಲ ಮತ್ತು ಉಸಿರುಗಟ್ಟುತ್ತಿದ್ದರು. ನಾನು ತಕ್ಷಣ ಸಿಪಿಆರ್ (ಹೃದಯ ಶ್ವಾಸಕೋಶದ ಪುನರುಜ್ಜೀವನ) ಮಾಡಿದ್ದೇನೆ ಮತ್ತು ಅವರ ಸ್ಥಿತಿ ಸುಧಾರಿಸಿದೆ. ಆಗ ಚುನಾವಣಾ ಕರ್ತವ್ಯದಲ್ಲಿದ್ದವರು ಧಾವಿಸಿ ಜ್ಯೂಸ್ ನೀಡಿದರು. ಆಂಬ್ಯುಲೆನ್ಸ್ ಅನ್ನು ಕರೆಸಿ ಆಸ್ಪತ್ರೆಗೆ ಸಾಗಿಸಲಾಯಿತು. ವಿಳಂಬವಾಗಿದ್ದರೆ ನಾವು ಅವಳನ್ನು ಕಳೆದುಕೊಳ್ಳುವ ಸಾಧ್ಯತೆ ಇತ್ತು' ಎಂದರು.
ಇದನ್ನೂ ಓದಿ:ದಕ್ಷಿಣ ಕನ್ನಡದಲ್ಲಿ ಅಧಿಕ ತಾಪಮಾನ: ಮತದಾರರಿಗೆ ಶಾಮಿಯಾನ ವ್ಯವಸ್ಥೆ, ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಮತದಾನ - shamiyana arrangement