ಬೆಂಗಳೂರು: ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಮಂಗಳವಾರ ರಾತ್ರಿ ನಡೆದಿದ್ದ ಮಹಿಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಎರಡನೇ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ದಿವ್ಯಾ (30)ಳನ್ನು ಪತಿ ಶಾಂತಕುಮಾರ್ ಕೊಲೆ ಮಾಡಿ ಬಂಧಿತನಾಗಿದ್ದಾನೆ.
ಈತನನ್ನು ವಿಚಾರಣೆಗೊಳಪಡಿಸಿದ ವೇಳೆ ತನ್ನ ಪತ್ನಿ ಬೇರೊಬ್ಬ ಯುವಕನ ಜೊತೆ ಸಂಬಂಧ ಹೊಂದಿದ್ದು, ಈ ಬಗ್ಗೆ ಬೈದು ಬುದ್ಧಿವಾದ ಹೇಳಿದರೂ ಕೇಳದ್ದರಿಂದ ಹತ್ಯೆ ಮಾಡಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ವಿವಿರ:ಹತ್ಯೆಗೀಡಾದ ದಿವ್ಯಾ ಬಿಡದಿಯ ಹೊಸದೊಡ್ಡಿ ಮೂಲದ ಯುವಕನನ್ನ ಮದುವೆಯಾಗಿದ್ದಳು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಕೌಟುಂಬಿಕ ಕಲಹದಿಂದ ಗಂಡನಿಂದ ದಿವ್ಯಾ ದೂರವಾಗಿದ್ದಳು. ಈ ನಡುವೆ ಆರೋಪಿ ಶಾಂತಕುಮಾರ್ನೊಂದಿಗೆ ದಿವ್ಯಾಳ ಪರಿಚಯವಾಗಿ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿ 2018ರಲ್ಲಿ ಚಿಕ್ಕಮಗಳೂರಿನಲ್ಲಿ ಮದುವೆಯಾಗಿದ್ದರು. ಪಾಂಡವಪುರ ಮೂಲದ ಶಾಂತಕುಮಾರ್, ಜ್ಯೋತಿಷ್ಯ ಹೇಳಿಕೊಂಡು ಜೀವನ ಸಾಗಿಸುತ್ತಿದ್ದಾನೆ.
ವಿವಾಹದ ಬಳಿಕ ಮೊದಲ ಗಂಡನ ಮಕ್ಕಳಿಬ್ಬರಲ್ಲಿ ಮೊದಲ ಮಗುವನ್ನು ಶಾಂತಕುಮಾರ್ ಸಾಕುತ್ತಿದ್ದರೆ ಇನ್ನೊಂದು ತನ್ನ ತಾಯಿ ಬಳಿ ದಿವ್ಯಾ ಬಿಟ್ಟಿದ್ದಳು. ಕಾಲ ಕ್ರಮೇಣ ಜೀವನ ನಿರ್ವಹಣೆ ಕಷ್ಟವಾಗಿದ್ದರಿಂದ ಬೆಂಗಳೂರಿಗೆ ಹೋಗಿ ಕೆಲಸ ಮಾಡುವುದಾಗಿ ಹೇಳಿ 2022ರಲ್ಲಿ ನಗರಕ್ಕೆ ಬಂದಿದ್ದಳು. ಆರಂಭದಲ್ಲಿ ಪಿಜಿಯಲ್ಲಿದ್ದ ಈಕೆ ನಂತರ ಕಾಮಾಕ್ಷಿಪಾಳ್ಯದ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದಿವ್ಯಾಳ ಮೊಬೈಲ್ ಫೋನ್ ಕಳೆದುಹೋಗಿತ್ತು. ಶಾಂತಕುಮಾರ್ಗೆ ಈ ವಿಷಯ ತಿಳಿಸಿದ ದಿವ್ಯಾ ಆತನಿಂದ ಹೊಸ ಮೊಬೈಲ್ ಕೊಡಿಸಿಕೊಂಡಿದ್ದಳು. ಕೆಲ ದಿನಗಳ ಬಳಿಕ ಹೆಂಡತಿಯ ಕಳೆದ ಹೋಗಿದ್ದ ಸಿಮ್ ಕಾರ್ಡ್ ಅನ್ನು ದಾಖಲೆಗಳನ್ನು ಸಲ್ಲಿಸಿ ಅದೇ ನಂಬರ್ ಶಾಂತಕುಮಾರ್ ಪಡೆದಿದ್ದ. ಈ ವಿಷಯ ದಿವ್ಯಾಳಿಗೆ ಹೇಳಿರಲಿಲ್ಲ. ಬೆಂಗಳೂರಿಗೆ ಬಂದಿದ್ದ ದಿವ್ಯಾ ಇನ್ನೊಬ್ಬ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು.
ಈ ನಡುವೆ ದಿವ್ಯಾಳೊಂದಿಗೆ ಸಂಬಂಧ ಹೊಂದಿದ್ದ ಯುವಕ ಆಕೆಯ ಹಳೆ ನಂಬರ್ಗೆ ಕರೆ ಮಾಡಿ ಇದು ನನ್ನ ಹೆಂಡತಿ ಸಿಮ್ ಅಂದಿದ್ದ. ಇದೇ ಮಾತನ್ನು ದಿವ್ಯಾಳ ಮೂಲಕ ಹೇಳಿಸಿದ್ದ. ಕರೆ ಸ್ವೀಕರಿಸಿದ್ದ ಶಾಂತಕುಮಾರ್ ಒಂದು ಕ್ಷಣ ದಂಗಾಗಿದ್ದ. ತನ್ನ ಪತ್ನಿ ಬೇರೆ ಪರಪುರುಷನ ಜೊತೆ ಸಂಬಂಧ ಹೊಂದಿರುವುದನ್ನ ಖಾತ್ರಿ ಪಡಿಸಿಕೊಂಡಿದ್ದ. ಇದೇ ವಿಚಾರಕ್ಕಾಗಿ ಕರೆ ಮಾಡಿ ಜಗಳವಾಡಿದ್ದ. ಊರಿಗೆ ಬರುವಂತೆ ಬೈದು ಬುದ್ಧಿ ಹೇಳಿದರೂ ಶಾಂತಕುಮಾರ್ ಮಾತನ್ನ ಆಕೆ ನಿರ್ಲಕ್ಷ್ಯಿಸಿದ್ದಳು.
ಕೆಲದಿನಗಳ ಬಳಿಕ ಫೋನ್ ಮಾಡಿ ಮನೆ ಬದಲಾಯಿಸಬೇಕು 20 ಸಾವಿರ ಹಣ ಬೇಕೆಂದು ಹೇಳಿದ್ದಳು. ಹಣ ನೀಡಲು ಶಾಂತಕುಮಾರ್ ನಿರಾಕರಿಸಿದ್ದ. ಅನಂತರ ಒಮ್ಮೆ ಕರೆ ಮಾಡಿ ಆಟೋ ಬಾಡಿಗೆಗೆ 1500 ರೂಪಾಯಿ ನೀಡುವಂತೆ ದುಂಬಾಲು ಬಿದ್ದಿದ್ದಳು. ಆಟೋ ಚಾಲಕನ ಫೋನ್ ಪೇ ನಂಬರ್ ಪಡೆದು ಶಾಂತಕುಮಾರ್ ಹಣ ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೆ ಸಂಚು:ಕಾಮಾಕ್ಷಿಪಾಳ್ಯದಿಂದ ಸುಂಕದಕಟ್ಟೆ ಬಳಿ ಬಾಡಿಗೆ ಮನೆಗೆ ದಿವ್ಯಾ ಶಿಫ್ಟ್ ಆಗಿದ್ದಳು. ಹೆಂಡತಿ ವಿರುದ್ಧ ಕೆಂಡಕಾರುತ್ತಿದ್ದ ಶಾಂತಕುಮಾರ್ಗೆ ಹೊಸ ಬಾಡಿಗೆ ಮನೆ ವಿಳಾಸ ಗೊತ್ತಿರಲಿಲ್ಲ. ತಾನು ಫೋನ್ ಪೇ ಮಾಡಿದ ಆಟೋ ಚಾಲಕನ ನಂಬರ್ಗೆ ಕರೆ ಮಾಡಿ ಹೆಂಡತಿ ಮನೆ ವಿಳಾಸ ಕೇಳಿ ಪಡೆದುಕೊಂಡಿದ್ದ. ಕಳೆದ ಮಂಗಳವಾರ ಪಾಂಡವಪುರದಿಂದ ಬರುವಾಗಲೇ ಚಾಕು ಖರೀದಿಸಿ ಮನೆ ಬಳಿ ಬಂದು ಗಲಾಟೆ ಮಾಡಿ ಚಾಕುವಿನಿಂದ ಮನಬಂದಂತೆ ಆಕೆಯ ಕೈ ಹಾಗೂ ಹೊಟ್ಟೆ ಸೇರಿ ಇನ್ನಿತರ ಭಾಗಗಳಿಗೆ ಚುಚ್ಚಿ ಹತ್ಯೆ ಮಾಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಅಪ್ರಾಪ್ತ ಮಗಳೊಂದಿಗೆ ಮದುವೆಗೆ ಒತ್ತಾಯ, ಅಣ್ಣ - ತಮ್ಮನ ಹತ್ಯೆ ಮಾಡಿದ ಬಾಲಕಿಯ ತಂದೆ - Double Murder