ಬಳ್ಳಾರಿ:ಅದು 1874ನೇಯ ಇಸವಿ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದ ಈ ದೇಶದ ಅಗ್ರಗಣ್ಯ ಹೋರಾಟಗಾರರನ್ನೇ ಹಿಡಿದಿಟ್ಟುಕೊಳ್ಳುವುದೇ ಬ್ರಿಟಿಷರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆಗ ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಗಣಿನಾಡಿನ ಮೂರು ಜೈಲುಗಳೇ ಪ್ರಮುಖ ಆಸರೆಯಾಗಿದ್ದವು.
ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಂದರ್ಭ ಕ್ಷಯರೋಗ ಕಾಯಿಲೆಯ ಭೀತಿ ಎದುರಾಗಿತ್ತು. ಅದನ್ನು ನಿಯಂತ್ರಿಸುವ ಸಲುವಾಗಿಯೇ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿಯಲ್ಲಿ ಪ್ರತ್ಯೇಕ 'ವೆಲ್ಲೆಸ್ಲಿ' ಜೈಲನ್ನು ಅಂದಿನ ಬ್ರಿಟಿಷ್ ಸರ್ಕಾರವು ಪ್ರಾರಂಭಿಸಿತ್ತು. ಕ್ಷಯರೋಗಕ್ಕೆ ತುತ್ತಾಗಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಅಗತ್ಯ ಚಿಕಿತ್ಸೆಯನ್ನು ಕೊಡಿಸಿರುವ ನೆನಪು ಇಂದಿಗೂ ಜೀವಂತವಾಗಿದೆ.
ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಗಣಿ ಜಿಲ್ಲೆ ಬಳ್ಳಾರಿಗರ ಪಾತ್ರವು ಬಹುಮುಖ್ಯವಾಗಿದೆ. 1874ರಲ್ಲಿ ಮೊದಲಿಗೆ ಸೆಂಟ್ರಲ್ ಜೈಲನ್ನು ಪ್ರಾರಂಭಿಸಲಾಯಿತು. ಆ ಬಳಿಕ, ಅಲ್ಲೀಪುರದ ಕಂಟೋನ್ಮಂಟ್ ಪ್ರದೇಶದಲ್ಲೊಂದು ಜೈಲು, ಕ್ಷಯ ರೋಗಿಗಳಿಗೋಸ್ಕರವೇ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಜೈಲನ್ನು ಪ್ರಾರಂಭಿಸಲಾಗಿತ್ತು. ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಮೂರು ಜೈಲುಗಳಲ್ಲಿ ಇರಿಸಲಾಗಿತ್ತು ಎನ್ನುವುದು ಇತಿಹಾಸದಿಂದ ತಿಳಿದು ಬರುತ್ತದೆ.
ಇಲ್ಲಿನ ಜೈಲುಗಳು ಮೊದಲು ಮಾಪಳ ದಂಗೆಕೋರರ ನೆಲೆಯಾಗಿತ್ತು. ದಕ್ಷಿಣ ಭಾರತದ ಅಗ್ರಗಣ್ಯರ ಸ್ಥಳವಾಗಿ ಬಳ್ಳಾರಿ ಜೈಲುಗಳು ಮಾರ್ಪಟ್ಟಿರುವುದು ಬಹುಮುಖ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ಬಳ್ಳಾರಿ ಜೈಲಿಗೆ ಕರೆತಂದ ಸಂದರ್ಭ ಆ ಹೋರಾಟಗಾರರಲ್ಲಿ ಭಾಷಾಬಾಂಧವ್ಯ ಬೆಳೆಸೋದರ ಜೊತೆಜೊತೆಗೆ ಯುವಜನರಿಗೆ ಸ್ಫೂರ್ತಿದಾಯಕವೂ ಆಗಿತ್ತು ಎಂದು ಇತಿಹಾಸದ ಮೂಲಕ ತಿಳಿದುಬಂದಿದೆ.