ಗ್ರೌಂಡ್ ರಿಪೋರ್ಟ್ (ETV Bharat) ಬೆಳಗಾವಿ: ಕಳೆದ ಒಂದು ವಾರದಿಂದ ಬೆಳಗಾವಿ ನಗರ ಸೇರಿ ಜಿಲ್ಲಾದ್ಯಂತ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನು ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ರೈತರಿಗೆ ಬೆಳೆ ಹಾನಿ ಭೀತಿ ಕಾಡುತ್ತಿದೆ. ಹೌದು ಬೆಳಗಾವಿಯ ಧಾಮನೆ, ಯಳ್ಳೂರ, ವಡಗಾವಿ, ಅನಗೋಳ, ಶಾಹಪುರ, ರಾಣಿ ಚನ್ನಮ್ಮ ನಗರ ಸೇರಿ ವಿವಿಧ ಬಡಾವಣೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಳ್ಳಾರಿ ನಾಲಾಗೆ ಬಂದು ಸೇರುತ್ತದೆ.
ಬಳ್ಳಾರಿ ನಾಲಾ ಹೂಳು ತುಂಬಿಕೊಂಡಿದ್ದರಿಂದ ನೀರು ಅಕ್ಕ ಪಕ್ಕದ ರೈತರ ಜಮೀನುಗಳಿಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ರೈತರು ಬಿತ್ತಿರುವ ಬಾಸುಮತಿ, ಇಂದ್ರಾಯಿಣಿ, ಸಾಯಿರಾಮ ಭತ್ತದ ಬೆಳೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಡೆಯಾಗಿದೆ. ನೂರಾರು ಎಕರೆ ಜಮೀನು ಜಲಾವೃತವಾಗಿದ್ದು, ಮೊಣಕಾಲುದ್ದ ನೀರು ನಿಂತಿದೆ. ಬೆಳೆ ಹಾನಿ ಭೀತಿ ಎದುರಿಸುತ್ತಿರುವ ರೈತರು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಬರೋಬ್ಬರಿ 28 ಕಿ.ಮೀ. ಹೆಚ್ಚು ವಿಸ್ತಾರವಾಗಿ ಹರಿಯುವ ಬಳ್ಳಾರಿ ನಾಲಾ ಅನಗೋಳ, ಶಹಾಪುರ, ವಡಗಾಂವ್, ಜುನೆ ಬೆಳಗಾವಿ, ಮಾಧವಪುರ, ಹಲಗಾ, ಬಸವನ ಕುಡಚಿ ಭಾಗದ ರೈತರಿಗೆ ಕಂಟಕವಾಗಿ ಮಾರ್ಪಟ್ಟಿದೆ.
ಮತ್ತೆ ಬಳ್ಳಾರಿ ನಾಲಾ ಅವಾಂತರ (ETV Bharat) ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ರೈತ ರಾಜು ಮರವೆ, ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಯಾವಾಗ ಅಲಾರವಾಡ ಮೇಲ್ಸೇತುವೆ ನಿರ್ಮಿಸಿದರೋ ಆವಾಗಿನಿಂದ ಸಮಸ್ಯೆ ಆಗುತ್ತದೆ. ಅದಕ್ಕಿಂತ ಮೊದಲು ಎಷ್ಟೇ ಮಳೆ ಆದರೂ ನಾಲ್ಕು ದಿನಗಳಲ್ಲಿ ಜಮೀನುಗಳಿಂದ ನೀರು ಖಾಲಿಯಾಗುತ್ತಿತ್ತು. ಪ್ರತಿ ವರ್ಷ ನಮಗೆ ಈ ಗೋಳು ತಪ್ಪಿದ್ದಲ್ಲ. ಈ ಸಂಬಂಧ ಪ್ರತಿ ಸರ್ಕಾರಕ್ಕೂ ನಾವು ಮನವಿ ಸಲ್ಲಿಸಿ, ಹೋರಾಟ ಮಾಡಿ ಸಾಕಾಗಿದೆ. ಎಲ್ಲರೂ ಬರೀ ಆಶ್ವಾಸನೆ ಮಾತ್ರ ಕೊಡುತ್ತಾರೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರು 800 ಕೋಟಿ ರೂ. ಮಂಜೂರು ಮಾಡುತ್ತೇನೆ ಎಂದಿದ್ದರು. ಆದರೆ, 8 ರೂಪಾಯಿ ಕೂಡ ಕೊಟ್ಟಿಲ್ಲ. ಸರ್ಕಾರಕ್ಕೆ ಇಲ್ಲಿನ ರೈತರನ್ನು ಮಣ್ಣಲ್ಲೆ ಹೂತು, ದೊಡ್ಡ ಮಾಲ್ ಕಟ್ಟುವ ದೂರಾಲೋಚನೆ ಇರಬೇಕು ಎಂದು ಆರೋಪಿಸಿದರು.
ಮತ್ತೆ ಬಳ್ಳಾರಿ ನಾಲಾ ಅವಾಂತರ (ETV Bharat) ಮುಂದುವರಿದು ಮಾತನಾಡಿದ ರೈತ ರಾಜು ಮರವೆ, ಈಗ ಬಿತ್ತಿರುವ ಭತ್ತದಲ್ಲಿ ನೀರು ನಿಂತಿದ್ದರಿಂದ ಸಂಪೂರ್ಣವಾಗಿ ಹಾನಿಯಾಗುತ್ತದೆ. ನಾಟಿ ಮಾಡಿರುವ ಭತ್ತದ ಮೇಲೆ 2 ಇಂಚು ಮಾತ್ರ ನೀರು ಇರಬೇಕು. ಆದರೆ, ಇಲ್ಲಿ ಮೊಣಕಾಲುದ್ದ ನೀರು ನಿಂತಿದೆ. ಹಾಗಾಗಿ, ಈಗ ಮತ್ತೊಮ್ಮೆ ನಾವು ಬಿತ್ತಬೇಕು. 1 ಎಕರೆ ಭತ್ತ ಬಿತ್ತಲು 50 ಸಾವಿರ ರೂ. ಖರ್ಚಾಗುತ್ತದೆ. ಆದ್ದರಿಂದ ಸರ್ಕಾರ ನಮಗೆ ಪ್ರತಿ ವರ್ಷ ಬೆಳೆ ಹಾನಿ ಪರಿಹಾರ ಕೊಡಬೇಡಿ. ಬಳ್ಳಾರಿ ನಾಲಾ ಹೂಳು ಎತ್ತಿ, ಸ್ವಚ್ಛ ಮಾಡಿ ಕೊಟ್ಟು ಬಿಡಿ ಅಷ್ಟೇ ಸಾಕು ಎಂದು ಸರ್ಕಾರಕ್ಕೆ ಕೈ ಮುಗಿದು ಕೇಳಿಕೊಂಡರು. ಒಂದೆಡೆ ಮಳೆ ಅನ್ನದಾತನಿಗೆ ವರವಾಗಿದ್ದರೆ, ಮತ್ತೊಂದೆಡೆ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದರಿಂದ ಅಲ್ಲಿನ ರೈತರು ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಇದಕ್ಕೆ ಆಡಳಿತದಿಂದ ಯಾವ ಪ್ರತಿಕ್ರಿಯೆ ಬರುತ್ತದೆಯೋ ಕಾದು ನೋಡ್ಬೇಕು.
ಓದಿ:ಬಳ್ಳಾರಿ ನಾಲಾ ಅವಾಂತರ ತಪ್ಪಿಸಿ, ಶಾಶ್ವತ ಪರಿಹಾರ ಕಲ್ಪಿಸಿ: ಬೆಳಗಾವಿ ರೈತರು, ನಾಗರಿಕರ ಆಗ್ರಹ - Ballari Canal Issue