ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ ಬೆಳಗಾವಿ:ಜಗತ್ತಿನಲ್ಲೆ ಮೊಟ್ಟ ಮೊದಲ ಮಹಿಳಾ ಸೈನ್ಯ ಕಟ್ಟಿದ, ಛತ್ರಪತಿ ಶಿವಾಜಿ ಸೈನ್ಯವನ್ನೇ ಮಣಿಸಿದ ಬೆಳವಡಿ ಮಲ್ಲಮ್ಮ ಕನ್ನಡ ನಾಡಿನ ಸಮರ ಸಿಂಹಿಣಿ. ಇಂಥ ದಿಟ್ಟ ವೀರರಾಣಿಯ ಇತಿಹಾಸ ಸಾರುವ ಉದ್ದೇಶದಿಂದ ಫೆ. 28, 29ರಂದು ಎರಡು ದಿನಗಳ ಕಾಲ ಸರ್ಕಾರದಿಂದ ಉತ್ಸವ ಆಯೋಜಿಸಿದೆ. ಈ ಕುರಿತು ಈಟಿವಿ ಭಾರತದ ವಿಶೇಷ ವರದಿ ಇಲ್ಲಿದೆ.
ಹೌದು ಬೆಳವಡಿ ಮಲ್ಲಮ್ಮನ ಹೆಸರು ಕೇಳಿದರೆ ಮೈ ಮನಗಳೆಲ್ಲಾ ರೋಮಾಂಚನಗೊಳ್ಳುತ್ತವೆ. ಆಕೆಯ ಶೌರ್ಯ, ಸಾಹಸ ಕಣ್ಮುಂದೆ ಬರುತ್ತವೆ. ಓರ್ವ ಹೆಣ್ಣು ಮಗಳಾಗಿ ಬೆಳವಡಿ ಸಂಸ್ಥಾನವನ್ನು ನಡೆಸಿದ ಪರಿ, ಬಲಿಷ್ಠ ಶಿವಾಜಿ ಮಹಾರಾಜರ ಸೈನ್ಯ ಮಂಡಿಯೂರುವಂತೆ ಮಾಡಿದ್ದು ಎಲ್ಲರನ್ನೂ ಬೆರಗುಗೊಳಿಸುತ್ತದೆ. ಇಷ್ಟೆಲ್ಲಾ ಪರಾಕ್ರಮ ಮೆರೆದಿರುವ ಮಲ್ಲಮ್ಮ ಸಮಗ್ರ ಇತಿಹಾಸ ಬೆಳಕಿಗೆ ಬಾರದಿರೋದು ಈ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳವಡಿ ಸಂಸ್ಥಾನದ ಕುರುಹುಗಳ ವೀಕ್ಷಣೆಗಾಗಿ ದೂರದೂರುಗಳಿಂದ ಬರುವ ಇತಿಹಾಸಪ್ರಿಯರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ನಿರಾಸೆಯಿಂದ ಮರಳುವುದು ತಪ್ಪಿಲ್ಲ. ಯಾಕೆಂದರೆ ಬೆಳವಡಿ ಗ್ರಾಮದಲ್ಲಿ ಮಲ್ಲಮ್ಮ ವೃತ್ತದಲ್ಲಿ ರಾಣಿ ಪುತ್ಥಳಿ ಬಿಟ್ಟರೆ ಮತ್ಯಾವ ಕುರುಹು ನಿಮಗೆ ಕಾಣಸಿಗುವುದಿಲ್ಲ. ಹಾಗಾಗಿ, ಈ ನೆಲದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಜತೆಗೆ ಯುವಪೀಳಿಗೆಯಲ್ಲಿ ನಾಡಿನ ಅಭಿಮಾನ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ 'ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ' ರಚಿಸಬೇಕು. ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಿಗೆ ಸಿಕ್ಕ ಪ್ರಾಧಾನ್ಯತೆ ಬೆಳವಡಿ ಮಲ್ಲಮ್ಮನಿಗೂ ಸಿಗುವಂತಾಗಬೇಕು ಎಂಬುದು ಅಭಿಮಾನಿಗಳ ಆಗ್ರಹವಾಗಿದೆ.
ಮಲ್ಲಮ್ಮಾಜಿ ಕುರುಹುಗಳ ಸಂರಕ್ಷಿಸಿ:ಬೈಲಹೊಂಗಲ ತಾಲೂಕಿನ ಮುಳಕೂರ ಗ್ರಾಮದಲ್ಲಿ ಬೆಳವಡಿ ದೇಸಾಯಿ ಸಂಸ್ಥಾನಕ್ಕೆ ಸೇರಿದ ಜಮೀನಿನಲ್ಲಿ ಮಲ್ಲಮ್ಮಳ ಸಮಾಧಿ ಇದ್ದು, ಮಲಪ್ರಭಾ ನದಿಯಲ್ಲಿ ಅದು ಮುಳುಗಡೆಯಾಗಿದೆ. ಬೆಳವಡಿ ಸಂಸ್ಥಾನಕ್ಕೆ ಸೇರಿದ ಮೂಲ ದಾಖಲೆಗಳು ಸವದತ್ತಿ ತಾಲೂಕಿನ ಹೂಲಿ ಬೃಹನ್ಮಠದಲ್ಲಿವೆ. ಶಿವಾಜಿ-ಮಲ್ಲಮ್ಮ ನಡುವೆ ನಡೆದ ಯುದ್ಧದ ಪ್ರತೀಕವಾದ ವೀರಗಲ್ಲು ಧಾರವಾಡ ಜಿಲ್ಲೆಯ ಯಾದವಾಡದ ಹನುಮಂತೇಶ್ವರ ದೇವಸ್ಥಾನದ ಎದುರುಗಡೆ ಇದೆ. ಅದೇ ರೀತಿ ಸಿದ್ಧಸಮುದ್ರ, ಚಚಡಿ, ಮುತವಾಡ ಹಾಗೂ ಸತ್ತಿಗೇರಿಯಲ್ಲೂ ವೀರಗಲ್ಲುಗಳಿವೆ. ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ.
ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮನ ಹೆಸರಿಡಿ:ಜಗತ್ತಿನಲ್ಲಿ ಮೊಟ್ಟ ಮೊದಲ ಮಹಿಳಾ ಸೈನ್ಯ ಕಟ್ಟಿದ ಧ್ಯೋತಕದ ಪ್ರತೀಕವಾಗಿ ರಾಷ್ಟ್ರೀಯ ಮಹಿಳಾ ಸೈನ್ಯಕ್ಕೆ ಮಲ್ಲಮ್ಮಾಜಿ ಹೆಸರಿಡಬೇಕು. ರಾಜ್ಯ-ದೇಶದ ಪ್ರಮುಖ ಕೇಂದ್ರಗಳಿಗೆ, ಸಂಸ್ಥೆಗಳಿಗೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಇಲ್ಲವೇ ರೈಲ್ವೆ ನಿಲ್ದಾಣಕ್ಕೆ ಬೆಳವಡಿ ಮಲ್ಲಮ್ಮನ ಹೆಸರು ಇಡಬೇಕು. ರಾಷ್ಟ್ರ ಮಟ್ಟದಲ್ಲಿ ಮಲ್ಲಮ್ಮನ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡುವುದು ಸೇರಿ ಈ ವೀರಾಗ್ರಣಿ ಹೆಸರು ಉಳಿಸಲು ಮತ್ತಷ್ಟು ಕಾರ್ಯಕ್ರಮ ರೂಪಿಸಬೇಕು.
ಕಾದಂಬರಿಕಾರ ಯ.ರು. ಪಾಟೀಲ ಈಟಿವಿ ಭಾರತ ಜೊತೆಗೆ ಮಾತನಾಡಿ, ವೀರ ರಾಣಿ ಬೆಳವಡಿ ಮಲ್ಲಮ್ಮ ಕೇವಲ ರಾಣಿ ಅಷ್ಟೇ ಅಲ್ಲ ಮಹಿಳಾ ಸಬಲೀಕರಣದ ರೂವಾರಿ. ಕನ್ನಡ ಮತ್ತು ಮರಾಠಿ ಬಾಂಧವ್ಯದ ಪ್ರತೀಕ. ಕೇವಲ ಉತ್ಸವ ಬಂದಾಗ ಮಾತ್ರ ಮಲ್ಲಮ್ಮನ ನೆನಪಿಸಿಕೊಳ್ಳೋದು ಸರಿಯಲ್ಲ. ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು. ಸಂಗೊಳ್ಳಿ ರಾಯಣ್ಣನ ರಾಕ್ ಗಾರ್ಡನ್ ಮಾದರಿಯಲ್ಲಿ ಬೆಳವಡಿಯಲ್ಲಿ ಮಲ್ಲಮ್ಮನ ಸಮಗ್ರ ಇತಿಹಾಸ ಬಿಂಬಿಸುವ ರಾಕ್ ಗಾರ್ಡನ್ ನಿರ್ಮಿಸಬೇಕು. ಪಠ್ಯದಲ್ಲಿ ಮಲ್ಲಮ್ಮನ ಕುರಿತು ಪಾಠ ಸೇರಿಸಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಮಲ್ಲಮ್ಮನ ಇತಿಹಾಸ ತಿಳಿಯಲು ಸಾಧ್ಯ ಎಂದು ಆಗ್ರಹಿಸಿದರು.
ಕೆಳದಿ ಚೆನ್ನಮ್ಮನಿಗೂ ಮಲ್ಲಮ್ಮ ಪ್ರೇರಣೆ:ವೀರರಾಣಿ ಕೆಳದಿ ಚೆನ್ನಮ್ಮ ಹಾಗೂ ಬೆಳವಡಿ ಮಲ್ಲಮ್ಮ ಸಮಕಾಲೀನ ರಾಣಿಯರು. ಶಿವಾಜಿ ಮಹಾರಾಜ ಪುತ್ರ ರಾಜಾರಾಮನನ್ನು ಔರಂಗಜೇಬನ ಸೈನಿಕರು ಬೆನ್ನಟ್ಟಿ ಬಂದಾಗ ಆತನಿಗೆ ಆಶ್ರಯ ಕೊಡಲು ಯಾರೂ ಮುಂದೆ ಬರೋದಿಲ್ಲ. ಆಗ ರಾಜಾರಾಮನಿಗೆ ಆಶ್ರಯ ಕೊಟ್ಟಿದ್ದು ಇದೇ ಕನ್ನಡ ರಾಣಿ ಕೆಳದಿ ಚೆನ್ನಮ್ಮ. ಆ ಸಂದರ್ಭದಲ್ಲಿ ಒಂದಿಷ್ಟು ಜನರು ದಿಲ್ಲಿಯ ಅಷ್ಟು ದೊಡ್ಡ ದೊರೆ ಔರಂಗಜೇಬನ ಎದುರು ಹಾಕಿಕೊಂಡು ಶಿವಾಜಿ ಮಗನಿಗೆ ಆಶ್ರಯ ನೀಡಲು ಅಷ್ಟೊಂದು ಧೈರ್ಯ ಎಲ್ಲಿಂದು ಬಂತು ಎಂದು ಪ್ರಶ್ನಿಸುತ್ತಾರೆ.
ಆಗ ಚೆನ್ನಮ್ಮ ಬೆಳವಡಿ ಮಲ್ಲಮ್ಮನಿಂದ ನನಗೆ ಆ ಧೈರ್ಯ ಬಂತು ಎನ್ನುತ್ತಾರಂತೆ. ಹಾಗಾಗಿ, ಮಲ್ಲಮ್ಮ ಕೇವಲ ಬೆಳವಡಿ ಮತ್ತು ಬೆಳಗಾವಿಗೆ ಮಾತ್ರ ಸೀಮಿತವಾಗಿರಲಿಲ್ಲ. ಇಡೀ ರಾಜ್ಯದಲ್ಲೂ ಅವಳ ಕೀರ್ತಿ, ಶೌರ್ಯ, ಸಾಹಸ ಪಸರಿಸಿತ್ತು ಎಂದು ಕಾದಂಬರಿಕಾರ ಯ.ರು. ಪಾಟೀಲ ಸ್ಮರಿಸಿದರು. ಒಟ್ಟಿನಲ್ಲಿ "ಬೆಳವಡಿ ಮಲ್ಲಮ್ಮ"ಕೇವಲ ಉತ್ಸವಕ್ಕೆ ಮಾತ್ರ ಸೀಮಿತವಾಗದೇ ನಿತ್ಯವೂ ಜಪಿಸುವಂತಾಗಲಿ ಎಂಬುದು ಎಲ್ಲರ ಆಶಯ.
ಇದನ್ನೂ ಓದಿ:ಕಲಬುರಗಿಯ ಗಾಣಗಾಪುರಕ್ಕೆ ಮೂಲ ಸೌಕರ್ಯ ಕೋರಿ ಅರ್ಜಿ : ಕೇಂದ್ರ, ರಾಜ್ಯಕ್ಕೆ ಹೈಕೋರ್ಟ್ ನೋಟಿಸ್