ಬೆಳಗಾವಿ: ಜಿಲ್ಲೆಯ ವಿವಿಧೆಡೆ ಅಕ್ರಮವಾಗಿ ಸಾರಾಯಿ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಅವರಿಗೆ ಕರೆ ಮಾಡಿ ಮನವಿ ಮಾಡಿದರು. ಮಂಗಳವಾರ ಎಸ್ಪಿ ಕಚೇರಿಯಲ್ಲಿ ನಡೆಸಿದ 20ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಜನರು ಕರೆ ಮಾಡಿ ದೂರುಗಳನ್ನು ನೀಡಿದರು.
ಅಥಣಿಯ ವ್ಯಕ್ತಿಯೊಬ್ಬರು ಕರೆ ಮಾಡಿ, "ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶೌಚಾಲಯದ ವ್ಯವಸ್ಥೆ ಸರಿ ಇಲ್ಲ. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಗೋಕಾಕ-ಅಥಣಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಳು ಸಾಗಾಟ ಮಾಡುತ್ತಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ" ಎಂದು ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ವ್ಯಕ್ತಿಯೊಬ್ಬರು, "ಜ.23ರಂದು ಆನ್ಲೈನ್ನಲ್ಲಿ ಮೋಸ ಹೋಗಿ 58 ಲಕ್ಷ ರೂ. ಕಳೆದುಕೊಂಡಿದ್ದೇನೆ. ಈಗಾಗಲೇ ದೂರು ನೀಡಲಾಗಿದೆ. ಇಲ್ಲಿಯವರೆಗೂ ಹಣ ಪತ್ತೆಯಾಗಿಲ್ಲ. ನಮ್ಮ ಹಣ ಯಾವಾಗ ಸಿಗುತ್ತದೆ" ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಎಸ್ಪಿ, "ಆನ್ಲೈನ್ನಲ್ಲಿ ಹಣ ಕಳೆದುಕೊಂಡ ತಕ್ಷಣ ಪೊಲೀಸರಿಗೆ ದೂರು ನೀಡಬೇಕೆಂದು ಈಗಾಗಲೇ ಜಿಲ್ಲಾ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ. ನೀವು ಹಣ ಕಳೆದುಕೊಂಡು 8 ದಿನದ ಮೇಲೆ ದೂರು ನೀಡಿದ್ದೀರಿ. ಆನ್ಲೈನ್ನಲ್ಲಿ ಕಳೆದುಕೊಂಡ ಹಣ ಬೇರೆ ಬೇರೆ ಕಡೆ ವರ್ಗಾವಣೆಯಾಗಿರುತ್ತದೆ. ಆದಷ್ಟು ಬೇಗ ಪೊಲೀಸರು ಹಣ ಮರಳಿ ಕೊಡಿಸುವ ಪ್ರಯತ್ನ ಮಾಡುತ್ತಾರೆ" ಎಂದು ಭರವಸೆ ಕೊಟ್ಟರು.