ಕರ್ನಾಟಕ

karnataka

ಬೆಳಗಾವಿ: ಠಾಣೆಯಲ್ಲಿ ಮಹಿಳೆಯ ಮೇಲೆ ಮಹಿಳಾ ಪಿಎಸ್ಐಯಿಂದಲೇ ದೌರ್ಜನ್ಯ ಆರೋಪ - PSI Assault On Woman

By ETV Bharat Karnataka Team

Published : Jul 28, 2024, 1:30 PM IST

ದೂರು ನೀಡಲು ಠಾಣೆಗೆ ಆಗಮಿಸಿದ ಮಹಿಳೆಯ ಮೇಲೆ ಪಿಎಸ್ಐ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಬೆಳಗಾವಿಯಲ್ಲಿ ಕೇಳಿಬಂದಿದೆ.

FILE COMPLAINT  WOMAN ALLEGATION  BELAGAVI
ಮಹಿಳಾ ಪಿಎಸ್ಐ ವಿರುದ್ಧ ದೌರ್ಜನ್ಯ ಎಸಗಿದ ಆರೋಪ (ETV Bharat)

ಚಿಕ್ಕೋಡಿ(ಬೆಳಗಾವಿ): ಪಕ್ಕದ್ಮನೆ ಗೋಡೆ ಮತ್ತು ನೀರಿನ ವಿಚಾರವಾಗಿ ಸಹೋದರರೊಂದಿಗೆ ಜಗಳವಾಡಿ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಯ ಮೇಲೆ ಮಹಿಳಾ ಪಿಎಸ್ಐ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ನಿಪ್ಪಾಣಿ ತಾಲೂಕಿನ ಖಡಕಲಾಟ ಗ್ರಾಮದ ಪೂನಂ ಮಾಯಣ್ಣವರ ಎಂಬವರ ಮೇಲೆ ಪಿಎಸ್ಐ ಅನೀತಾ ರಾಠೋಡ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಮಹಿಳೆಗೆ ನಿಪ್ಪಾಣಿ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂತ್ರಸ್ತ ಮಹಿಳೆಯ ಹೇಳಿಕೆ: ಈ ಘಟನೆಯ ಕುರಿತು ಪೂನಂ ಮಾಯಣ್ಣವರ ಮಾಧ್ಯಮದ ಜೊತೆ ಮಾತನಾಡಿ, "ನಮ್ಮ ಅಣ್ಣ ತಮ್ಮಂದಿರೊಂದಿಗೆ ಜಗಳ ನಡೆದಿತ್ತು. ಶನಿವಾರ ರಾತ್ರಿ ಪಿಎಸ್ಐ ಮನೆಗೆ ಬಂದಿದ್ದರು. ಮನೆಯಲ್ಲಿ ಪುರುಷರು ಯಾರೂ ಇಲ್ಲದ ಕಾರಣ ನಾನು ಮುಂಜಾನೆ ಠಾಣೆಗೆ ಬರುತ್ತೇನೆ ಎಂದು ಹೇಳಿದೆ. ಆದ್ರೂ ಸಹ ಕಾನೂನುಬಾಹಿರವಾಗಿ ನನ್ನನ್ನು ವಶಕ್ಕೆ ಪಡೆದಿದ್ದಲ್ಲದೇ, ಠಾಣೆಗೆ ಕರೆದುಕೊಂಡು ಹೋಗಿ ಕಪಾಳಮೋಕ್ಷ ಮಾಡಿದರು" ಎಂದು ಹೇಳಿದರು.

"ಕಾಲಿನಲ್ಲಿ ನನ್ನ ಹೊಟ್ಟೆ, ಎದೆ ಸೇರಿದಂತೆ ದೇಹದ ವಿವಿಧೆಡೆ ಒದ್ದು ದೌರ್ಜನ್ಯ ನಡೆಸಿದರು. ಒಬ್ಬ ಹೆಣ್ಣಾಗಿ ಹೆಣ್ಣಿನ ಬೆಲೆ ಅರಿಯದೇ ಮನಬಂದಂತೆ ಹಲ್ಲೆ ಮಾಡಿದರು. ಏಕಮುಖವಾಗಿ ವಿಚಾರಣೆ ನಡೆಸಿ ಕ್ರೌರ್ಯ ಮೆರೆದರು. ಹಲ್ಲೆ ಮಾಡುತ್ತಿದ್ದಂತೆ ನಾನು ಮೂರ್ಛೆ ಹೋಗಿ ಕುಸಿದುಬಿದ್ದೆ. ಬಳಿಕ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ರೀತಿಯ ದರ್ಪದ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು" ಎಂದು ಅವರು ಒತ್ತಾಯಿಸಿದರು.

ಹಲ್ಲೆಗೊಳಗಾದ ಮಹಿಳೆಯ ಪತಿ ಪ್ರಕಾಶ್ ಮಾಯಣ್ಣವರ ಮಾತನಾಡಿ, "ನನ್ನ ಪತ್ನಿಯನ್ನು ರಾತ್ರಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗೆ ಮಾನವೀಯತೆಯೇ ಇಲ್ಲ. ಅಂಥವರು ಈ ಇಲಾಖೆಯಲ್ಲಿ ಇರಬಾರದು. ಇವರ ವಿರುದ್ಧ ಗೃಹ ಸಚಿವರು ಕಠಿಣ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು" ಎಂದು ಆಗ್ರಹಿಸಿದರು.

ಎಸ್ಪಿ ಪ್ರತಿಕ್ರಿಯೆ: ಬೆಳಗಾವಿ ಎಸ್ಪಿ ಭೀಮಶಂಕರ್ ಗುಳೇದ್ ಪ್ರಕರಣದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ಮಹಿಳೆಯ ಮೇಲೆ ಪಿಎಸ್ಐ ಕಪಾಳ ಮೋಕ್ಷ ಮಾಡಿರುವುದು ದೃಢಪಟ್ಟಿದೆ. ಹೊಟ್ಟೆಯ ಭಾಗಕ್ಕೆ ಒದ್ದಿಲ್ಲ. ಇಲಾಖೆಯ ವತಿಯಿಂದ ಮಹಿಳಾ ಪಿಎಸ್ಐ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ" ಎಂದು ಹೇಳಿದರು.

ABOUT THE AUTHOR

...view details