ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಮರ: ಶೆಟ್ಟರ್ - ಮೃಣಾಲ್ ಮಧ್ಯೆ ಜಿದ್ದಾಜಿದ್ದಿ, ಹೇಗಿದೆ ಲೆಕ್ಕಾಚಾರ? - Belagavi Lokasabha Fight - BELAGAVI LOKASABHA FIGHT

ಜೂನ್ 4 ರ ಲೋಕಸಭಾ ಫಲಿತಾಂಶಕ್ಕಾಗಿ ದಿನಗಣನೆ ಶುರುವಾಗಿದೆ. ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುರುವಾಗಿದ್ದರೆ, ಕಾರ್ಯಕರ್ತರು ಮತ್ತು ಮತದಾರರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಬಿಜೆಪಿ ಭದ್ರಕೋಟೆ ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್​ನ ಮೃಣಾಲ್ ಹೆಬ್ಬಾಳ್ಕರ್ ಮಧ್ಯೆ ನೇರ ಪೈಪೋಟಿ ಇದೆ.

ಜಗದೀಶ್ ಶೆಟ್ಟರ್, ಮೃಣಾಲ್ ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್, ಮೃಣಾಲ್ ಹೆಬ್ಬಾಳ್ಕರ್ (ETV Bharat)

By ETV Bharat Karnataka Team

Published : Jun 2, 2024, 12:57 PM IST

Updated : Jun 2, 2024, 1:04 PM IST

ಬೆಳಗಾವಿ:ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಈ ಬಾರಿ ಹಲವು ಕಾರಣಗಳಿಂದ ಸದ್ದು ಮಾಡಿದ ಕ್ಷೇತ್ರ. ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಕಾಂಗ್ರೆಸ್​ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸ್ಪರ್ಧೆಯಿಂದ ಬೆಳಗಾವಿ ಲೋಕಸಮರ ತೀವ್ರ ಕುತೂಹಲ ಮೂಡಿಸಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಅಂತಿಮವಾಗಿ ಯಾರಿಗೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬುದು ಜೂನ್ 4ಕ್ಕೆ ಬಹಿರಂಗವಾಗಲಿದೆ. ಆ ಕುರಿತು ಒಂದು ವರದಿ.

ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಮಾಡಿದ್ದಾರೆ. ಬಹಿರಂಗ ಸಮಾವೇಶ, ರೋಡ್ ಷೋ, ಮನೆ ಮನೆಗೆ ಭೇಟಿ ಸೇರಿ ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಅಭ್ಯರ್ಥಿಗಳ ನಡುವೆ ಟಾಕ್ ವಾರ್ ಕೂಡ ಜೋರಾಗಿತ್ತು. ಪುತ್ರ ಮೃಣಾಲ್ ಪರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡಿದರೆ, ಜಗದೀಶ್ ಶೆಟ್ಟರ್ ಬೆನ್ನಿಗೆ ಅಂಗಡಿ ಕುಟುಂಬ, ಮಾಜಿ ಸಚಿವ ರಮೇಶ ಜಾರಕಿಹೊಳಿ ನಿಂತಿದ್ದರು.

ಜಗದೀಶ್ ಶೆಟ್ಟರ್ (ETV Bharat)

ಇನ್ನು, ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಪಾರುಪತ್ಯ ಮುಂದುವರಿಸಲು ಕಮಲ ಪಡೆ ತಂತ್ರ ರೂಪಿಸಿದರೆ, ಎರಡು ದಶಕಗಳ ಬಳಿಕ ಬೆಳಗಾವಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಕೈಪಡೆ ಪ್ರತಿತಂತ್ರ ರೂಪಿಸಿತ್ತು. ಎರಡೂ ಕಡೆ ಪ್ರಬಲ ಪೈಪೋಟಿ ಎದುರಾಗಿದ್ದರಿಂದ ಸಮಬಲದ ಹೋರಾಟ ಕಂಡುಬಂದಿದೆ. 2019ರ‌ ಚುನಾವಣೆಯಲ್ಲಿ‌ ಶೇ. 67.70 ರಷ್ಟು‌ ಮತದಾನವಾಗಿತ್ತು. ಈ ಬಾರಿಯ ಚುನಾವಣೆಯಲ್ಲಿ ಶೇ.71.38 ರಷ್ಟು ಮತದಾನ ದಾಖಲಾಗಿದೆ. ಹಿಂದಿನ‌ ಚುನಾವಣೆಗೆ ಹೋಲಿಸಿದರೆ ಶೇ.4ರಷ್ಟು ಮತದಾನ ಹೆಚ್ಚಾಗಿದೆ. ಶೆಟ್ಟರ್ ಮತ್ತು ಮೃಣಾಲ್ ಹಿನ್ನಡೆ, ಮುನ್ನಡೆಗೆ ಯಾವೆಲ್ಲ ಅಂಶಗಳು ಕಾರಣವಾಗಬಹುದು ಎಂಬ ವಿಶ್ಲೇಷಣೆ ಕ್ಷೇತ್ರದಲ್ಲಿ ನಡೆಯುತ್ತಿದೆ.

ಬೆಳಗಾವಿ ಬಿಜೆಪಿ ಭದ್ರಕೋಟೆ:ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿದೆ. ಹಾಗಾಗಿ, ಇದು ಬಿಜೆಪಿ ಭದ್ರಕೋಟೆ. ಬಿಜೆಪಿ ತಳಮಟ್ಟದಲ್ಲಿ ಗಟ್ಟಿಯಾಗಿದೆ. ಜೊತೆಗೆ ಕಳೆದ ಎರಡು ಚುನಾವಣೆಗಳಂತೆ ಈ ಬಾರಿಯೂ ಬೆಳಗಾವಿಯಲ್ಲಿ ಮೋದಿ ಅಲೆ ಕಂಡುಬಂದಿದೆ. ಹಾಗೆಯೇ ಜಗದೀಶ್​ ಶೆಟ್ಟರ್ ಅವರಿಗೆ ಮುಖ್ಯಮಂತ್ರಿ, ಸಚಿವ, ಸ್ಪೀಕರ್ ಆಗಿ ಕೆಲಸ ಮಾಡಿದ ಅನುಭವವಿದೆ. ಇವರು ಗೆದ್ದರೆ ಕೇಂದ್ರದಲ್ಲಿ ಮಂತ್ರಿ‌ ಆಗುತ್ತಾರೆಂದು ಪ್ರಚಾರ ಮಾಡಿದ್ದು, ಸ್ಥಳೀಯರಲ್ಲಿ ಭರವಸೆ ಮೂಡಿಸಲಾಗಿತ್ತು.

ಪ್ರಧಾನಿ ಮೋದಿ ಅವರು ಜಗದೀಶ್​ ಶೆಟ್ಟರ್ ಪರ ಭರ್ಜರಿ ಕ್ಯಾಂಪೇನ್ ಸಹ ಮಾಡಿದ್ದರು. ಕುಂದಾನಗರಿಯಲ್ಲಿ ಬೃಹತ್ ಸಮಾವೇಶ ನಡೆಸಿ, ಮತಬೇಟೆ ಕೈಗೊಂಡಿದ್ದರು. ಮೋದಿ ಆಗಮಿಸಿದ್ದು ಶೆಟ್ಟರ್​​ಗೆ ಆನೆಬಲ ತಂದು ಕೊಟ್ಟಿದೆ ಎಂಬ ಮಾತುಗಳು ಕೇಳಿಬಂದಿದ್ದವು.

ಇದನ್ನೂ ಓದಿ:ಎನ್​ಡಿಎಗೆ 300ಕ್ಕಿಂತ ಕಡಿಮೆ ಸ್ಥಾನ ಯಾವುದೇ ಕಾರಣಕ್ಕೂ ಬರಲ್ಲ!!; ಚುನಾವಣಾ ರಣತಂತ್ರಗಾರನ ಸ್ಫೋಟಕ ಭವಿಷ್ಯ! - Prashant Kishor Prediction

ಹೇಗಿದೆ ಎಂಇಎಸ್ ಅಭ್ಯರ್ಥಿ ಪೈಪೋಟಿ: ಬೆಳಗಾವಿಯಲ್ಲಿ ತನ್ನದೇ ವೋಟ್ ಬ್ಯಾಂಕ್ ಹೊಂದಿರುವ ಎಂಇಎಸ್ ಈ ಬಾರಿ ಅಷ್ಟೇನು ಪ್ರಭಾವಿ ಅಲ್ಲದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅಲ್ಲದೇ ಮರಾಠಾ ಸಮುದಾಯ ಸದಾಕಾಲ ಹಿಂದುತ್ವದ ಪರ ನಿಲ್ಲುತ್ತದೆ. ಹಾಗಾಗಿ, ಹೆಚ್ಚಿನ ಮರಾಠಾ ಮತಗಳು ಬಿಜೆಪಿಗೆ ವಾಲಿದರೆ, ಬಿಜೆಪಿಗೆ ವರವಾಗಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ವಲಸಿಗ ಅಭ್ಯರ್ಥಿ, ಗೋಬ್ಯಾಕ್ ಅಭಿಯಾನ: ಜಗದೀಶ್​ ಶೆಟ್ಟರ್ ಹೊರಗಿನ ಜಿಲ್ಲೆಯವರು. ಅಲ್ಲದೇ ಟಿಕೆಟ್ ಘೋಷಣೆಗೂ ಮೊದಲೇ ಬಿಜೆಪಿ ಕಾರ್ಯಕರ್ತರಿಂದ ಗೋಬ್ಯಾಕ್ ಶೆಟ್ಟರ್ ಅಭಿಯಾನ ನಡೆದಿತ್ತು. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಸ್ವಪಕ್ಷದವರಿಂದಲೇ ಒತ್ತಾಯ ಕೇಳಿಬಂದಿತ್ತು. ಇನ್ನು ಜಿಲ್ಲೆಯ ಮುಖಂಡರು, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದರು. ಇದೆಲ್ಲವನ್ನೂ ಮೀರಿ ಶೆಟ್ಟರ್​ಗೆ ಟಿಕೆಟ್ ನೀಡಿರುವುದು ಇಲ್ಲಿನ ನಾಯಕರಲ್ಲಿ ಅಸಮಾಧಾನ ಮೂಡಿಸಿತ್ತು. ಬಳಿಕ ಅಸಮಾಧಾನ ಶಮನ ಮಾಡುವ ಶೆಟ್ಟರ್ ಪ್ರಯತ್ನ ಫಲಕೊಡುತ್ತಾ ನೋಡಬೇಕಿದೆ. ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಿಲ್ಲವೆಂದು ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಸೋತಿದ್ದರು. ಈಗ ಮತ್ತೆ ಬಿಜೆಪಿ ಸೇರಿದ್ದರಿಂದ ಅವರ ಮೇಲಿನ ಜನಾಭಿಪ್ರಾಯ ಬದಲಾಗಿದೆ ಎಂದು ಹೇಳಲಾಗ್ತಿದೆ.

ಬಿಜೆಪಿ‌ಗಿಂತ ಕಾಂಗ್ರೆಸ್ ಪರಿಣಾಮಕಾರಿಯಾಗಿ ಪ್ರಚಾರ ಮಾಡಿದೆ. ಅನೇಕ ಊರುಗಳಲ್ಲಿ ಬಿಜೆಪಿ ನಾಯಕರು ಪ್ರಚಾರವನ್ನೇ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಬಹುತೇಕ ಕಡೆ ಪ್ರಚಾರ ಮಾಡಿ, ಮತದಾರರನ್ನು ತಮ್ಮತ್ತ ಸೆಳೆಯಲು ಶಕ್ತಿ ಮೀರಿ ಪ್ರಯತ್ನಿಸಿರುವುದು ಕೈ ಮೇಲುಗೈ ಸಾಧಿಸಲು ಕಾರಣವಾಗಬಹುದು.

ಪಂಚಮಸಾಲಿ ಮತದಾರರು: ಮೃಣಾಲ್ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ರಾಜ್ಯದಲ್ಲಿ ಪ್ರಭಾವಿ ಸಚಿವೆ. ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮುಂಚೂಣಿಯಲ್ಲಿದ್ದರು. ಅಲ್ಲದೇ ತಮ್ಮ ಪುತ್ರನ ದೇಹದಲ್ಲಿ ಹರಿಯುತ್ತಿರೋದು ಪಂಚಮಸಾಲಿ ರಕ್ತ ಎಂದು ಪ್ರಚಾರ ಮಾಡಿ, ಸಮಾಜದ ಜನರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಹಾಗಾಗಿ, ಸಾಂಪ್ರದಾಯಿಕ ಮತಗಳ ಜೊತೆಗೆ ಪಂಚಮಸಾಲಿ ಸಮುದಾಯದ ಹೆಚ್ಚಿನ ಮತದಾರರು ಈ ಬಾರಿ ಕಾಂಗ್ರೆಸ್​​ನತ್ತ ಮುಖ ಮಾಡಬಹುದು. ಜೊತೆಗೆ ಮೃಣಾಲ್ ಬೆಳಗಾವಿಯ ಸ್ಥಳೀಯ ಅಭ್ಯರ್ಥಿ‌. ಜಗದೀಶ್​ ಶೆಟ್ಟರ್ ಪಕ್ಕದ ಧಾರವಾಡ ಜಿಲ್ಲೆಯವರು. ಪ್ರಚಾರದುದ್ದಕ್ಕೂ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಅನೇಕ ಕೈ ನಾಯಕರು ಇದನ್ನೇ ಮುಂದಿಟ್ಟುಕೊಂಡು ವ್ಯಾಪಕ ಪ್ರಚಾರ ಮಾಡಿದ್ದರು.

ಮೃಣಾಲ್ ಹೆಬ್ಬಾಳ್ಕರ್ (ETV Bharat)

ಗ್ಯಾರಂಟಿ ಬಲ, ಕೈ ಶಾಸಕರ ಭರವಸೆ:ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿದ್ದು, ಮಹಿಳಾ ಮತದಾರರು ಕೈ ಹಿಡಿಯಬಹುದೆಂಬ ವಿಶ್ಲೇಷಣೆ ಮಾಡಲಾಗುತ್ತಿದೆ. ಇನ್ನು, ಬೆಳಗಾವಿ ಲೋಕಸಭೆಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಐವರು ಕಾಂಗ್ರೆಸ್ ಶಾಸಕರಿದ್ದು, ಮೂವರು ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ, ಐವರು ಶಾಸಕರು ಕಾಂಗ್ರೆಸ್​ಗೆ ಹೆಚ್ಚು ಮತ ತಂದುಕೊಡುವ ಭರವಸೆ ನೀಡಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದ ಸಚಿವ ಸತೀಶ್​ ಜಾರಕಿಹೊಳಿ ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರ ಮಾಡಿರುವುದು ಬಿಜೆಪಿಗೆ ಮುಳುವಾಗಲಿದೆ ಎಂದು ಹೇಳಲಾಗುತ್ತಿದೆ.

ಆದರೆ ಮೃಣಾಲ್​ಗೆ ಅನುಭವದ ಕೊರತೆ ಇದೆ, ಜೊತೆಗೆ ಬೇರೆ ಆಕಾಂಕ್ಷಿಗಳನ್ನು ಬಿಟ್ಟು ಇವರಿಗೆ ಟಿಕೆಟ್ ನೀಡಿರುವುದು ನೆಗೆಟಿವ್ ಆಗಬಹುದಾದ ಸಾಧ್ಯತೆ ಇದೆ ಎಂದು ಕ್ಷೇತ್ರದಾದ್ಯಂತ ರಾಜಕೀಯ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಆದರೆ ಅಂತಿಮವಾಗಿ ಜೂನ್ 4 ರ ಫಲಿತಾಂಶ ಇದೆಲ್ಲಕ್ಕೂ ಪೂರ್ಣ ವಿರಾಮ ನೀಡಲಿದೆ.

ಇದನ್ನೂ ಓದಿ: 3ನೇ ಸಲವೂ ಎನ್​​ಡಿಎ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು!, ಅಷ್ಟಕ್ಕೂ NDA 400 ಸ್ಥಾನ ಗೆಲ್ಲುತ್ತಾ? - exit poll

Last Updated : Jun 2, 2024, 1:04 PM IST

ABOUT THE AUTHOR

...view details