ಬೆಳಗಾವಿ:ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ನಡೆಯಲಿರುವ ಮತದಾನಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಈ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ರಾಜಕೀಯ ಅಬ್ಬರ ಜೋರಾಗಿದೆ. ರಾಜ್ಯದ ಅತಿ ದೊಡ್ಡ ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಲು ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಬಿಜೆಪಿ ಭದ್ರಕೋಟೆಯಲ್ಲಿ ಮತ್ತೆ ಕಮಲ ಅರಳಿಸಲು ಜಗದೀಶ್ ಶೆಟ್ಟರ್ ತೀವ್ರ ಕಸರತ್ತು ನಡೆಸುತ್ತಿದ್ದರೆ, ಬಿಜೆಪಿ ಮಣಿಸಲು ಮೃಣಾಲ್ ಕೂಡ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ. ಬಿಜೆಪಿ ಮೋದಿ ಗ್ಯಾರಂಟಿ ನೆಚ್ಚಿಕೊಂಡರೆ, ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಜಪಿಸುತ್ತಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ಉಭಯ ಪಕ್ಷಗಳು ನಾನಾ ರೀತಿಯ ತಂತ್ರ, ಪ್ರತಿತಂತ್ರ ನಡೆಸುತ್ತಿವೆ.
ಕಳೆದ ಐದು ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿರುವ ಬಿಜೆಪಿ, ಈ ಚುನಾವಣೆಯಲ್ಲೂ ಮೋದಿ ಬಲದಿಂದ ಗೆಲುವಿನ ಕೇಕೆ ಹಾಕುವ ವಿಶ್ವಾಸದಲ್ಲಿದೆ. ಇನ್ನು ಕಾಂಗ್ರೆಸ್ ಈ ಬಾರಿ ಹೇಗಾದ್ರೂ ಮಾಡಿ ಬಿಜೆಪಿ ಕೈಯಿಂದ ಬೆಳಗಾವಿಯನ್ನು ವಶಕ್ಕೆ ಪಡೆದೇ ತೀರುತ್ತೇವೆ ಎನ್ನುವ ಧಾವಂತದಲ್ಲಿದೆ.
ಜಗದೀಶ್ ಶೆಟ್ಟರ್ ಪರ ಖುದ್ದು ಪ್ರಧಾನಿ ಮೋದಿ ಅವರೇ ಬೆಳಗಾವಿಗೆ ಆಗಮಿಸಿ ಭರ್ಜರಿ ಮತಬೇಟೆ ನಡೆಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಸೇರಿ ಘಟಾನುಘಟಿ ನಾಯಕರು ಕೂಡ ಪ್ರಚಾರ ಮಾಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ ಹಲವಾರು ನಾಯಕರು ಪ್ರಚಾರಕ್ಕೆ ಧುಮುಕಿದ್ದಾರೆ. ಮೋದಿ ಮುಖ ನೋಡಿ ಶೆಟ್ಟರ್ಗೆ ವೋಟ್ ಹಾಕುವಂತೆ ಹೇಳುತ್ತಿರುವ ಬಿಜೆಪಿ ಧಾಟಿಯಲ್ಲಿಯೇ, ಸಿದ್ದರಾಮಯ್ಯ ಕೂಡ ಮೃಣಾಲ್ ಅಲ್ಲ, ನಾನೇ ಅಭ್ಯರ್ಥಿ. ಮೃಣಾಲ್ಗೆ ಹಾಕುವ ವೋಟ್ ನನಗೆ ಹಾಕಿದಂತೆ ಎನ್ನುತ್ತಿದ್ದಾರೆ. ಪುತ್ರನ ಗೆಲುವಿಗೆ ಪಣ ತೊಟ್ಟಿರುವ ಲಕ್ಷ್ಮೀ ಹೆಬ್ಬಾಳ್ಕರ್ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಓಡಾಡುತ್ತಿದ್ದಾರೆ.