ಬೆಳಗಾವಿ: ವಿಘ್ನ ವಿನಾಯಕನನ್ನು ಅದ್ಧೂರಿಯಾಗಿ ಸ್ವಾಗತಿಸಲು ಕುಂದಾನಗರಿ ಬೆಳಗಾವಿ ಸಜ್ಜಾಗುತ್ತಿದ್ದು, ಹಬ್ಬಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಇಲ್ಲಿನ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದು, ಎಲ್ಲೆಡೆ ಹಬ್ಬ ಕಳೆಗಟ್ಟಿದೆ.
ಬೆಳಗಾವಿಯ ಗಣೇಶೋತ್ಸವ ವಿಭಿನ್ನವಾಗಿರುತ್ತದೆ. ಮಹಾರಾಷ್ಟ್ರ ಬಿಟ್ಟರೆ ಬೆಳಗಾವಿಯಲ್ಲೇ ಅದ್ಧೂರಿಯಾಗಿ ನಡೆಯುತ್ತದೆ. ಕಳೆದ ವರ್ಷ ಬರಗಾಲವಿದ್ದ ಕಾರಣ ಹಬ್ಬ ಸ್ವಲ್ಪ ಮಂಕಾಗಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗಿದೆ. ಜನ ವಿಜೃಂಭಣೆಯಿಂದ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಗುರುವಾರ ಬೆಳಗಾವಿಯ ಗಣಪತಿ ಗಲ್ಲಿ, ರವಿವಾರ ಪೇಟೆ, ಖಡೇಬಜಾರ, ಮಾರುತಿ ಗಲ್ಲಿ ಸೇರಿ ಹಲವೆಡೆ ಜನಜಂಗುಳಿ ಹೆಚ್ಚಿತ್ತು.
ಗಮನ ಸೆಳೆದ ಅಲಂಕಾರಿಕ ವಸ್ತುಗಳು:ಗಣೇಶನ ಮೂರ್ತಿಗೆ ಸಾಮಾನ್ಯವಾಗಿ ವಿಶೇಷ ಅಲಂಕಾರ ಮಾಡಲಾಗುತ್ತದೆ. ಹಾಗಾಗಿ, ಬಟ್ಟೆ ಮಾಲೆ, ಮುತ್ತಿನ ಮಾಲೆ, ಪ್ಲಾಸ್ಟಿಕ್ ಹೂವಿನ ಮಾಲೆ, ಪ್ಲಾಸ್ಟಿಕ್ ಚೆಂಡು ಹೂವಿನ ಮಾಲೆ, ಮುತ್ತಿನ ತೋರಣ, ಪ್ಲಾಸ್ಟಿಕ್ ಹೂವಿನ ತೋರಣ, ವಾಲ್ ಪೀಸ್, ಲಟ್ಕನ್, ಗಣಪತಿ ಆಸನ ಸೇರಿ ವಿವಿಧ ಅಲಂಕಾರಿಕ ವಸ್ತುಗಳ ವ್ಯಾಪಾರ ಜೋರಾಗಿತ್ತು. ಒಂದಕ್ಕಿಂತ ಒಂದು ವಸ್ತುಗಳು ಆಕರ್ಷಣೀಯವಾಗಿದ್ದು, ಕಲರ್ ಕಲರ್ ಪ್ಪಾಸ್ಟಿಕ್ ಹೂವಿನ ಮಾಲೆಗಳು, ತೋರಣಗಳು ನಿಜವಾದ ಹೂವುಗಳನ್ನೇ ನಾಚಿಸುವಂತಿದ್ದವು.
ಪೂಜಾ ಸಾಮಗ್ರಿ ಖರೀದಿ:ಪೂಜೆಗೆ ಬೇಕಾದ ಊದುಬತ್ತಿ, ಎಣ್ಣೆ, ಕರ್ಪೂರ, ಗೆಜ್ಜೆ ವಸ್ತ್ರ, ಆಸನ, ಅಲಂಕಾರಿಕ ವಸ್ತುಗಳು, ರಂಗೋಲಿ, ಲಟಕನ್, ಪಟಾಕಿ, ಅರಿಶಿಣ, ಕುಂಕುಮ, ಸಿಂಧೂರ, ಅಷ್ಟಗಂಧ, ಬತ್ತಿ, ಜೇನುತುಪ್ಪ, ಅತ್ತರ, ಕವಡಿ ಊದು, ಧೂಪ, ತೆಂಗಿನಕಾಯಿ, ಹಣ್ಣುಗಳನ್ನಿಡುವ ತಾಟುಗಳು ಸೇರಿ ಇನ್ನಿತರ ವಸ್ತುಗಳನ್ನು ಜನ ಖರೀದಿಸುತ್ತಿದ್ದರು. ಅದೇ ರೀತಿ ವಿದ್ಯುತ್ ಅಲಂಕಾರಿಕ ವಸ್ತುಗಳು, ಸೌಂಡ್‌ಸಿಸ್ಟಮ್ಸ್, ಸ್ಪೀಕರ್, ಎಲ್‌ಇಡಿ ಫೋಕಸ್ ಲೈಟ್, ವಿದ್ಯುತ್ ದೀಪಗಳು, ಲೇಸರ್, ಬಗೆ ಬಗೆಯ ಲೈಟ್ ಸರಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ಇದಲ್ಲದೇ ಗ್ರಾಹಕರು ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದರು.
ಹೂವಿನ ಮಂಟಪಕ್ಕೆ ಬೇಡಿಕೆ:ವ್ಯಾಪಾರಿ ದೀಪಕ್ ಗೋಕಾಕ್ 'ಈಟಿವಿ ಭಾರತ' ಜೊತೆಗೆ ಮಾತನಾಡಿ, "ಮಳೆ ಇದ್ದರೂ ವ್ಯಾಪಾರ ಚೆನ್ನಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದು ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಪ್ಲಾಸ್ಟಿಕ್ ಹೂವಿನ ಮಾಲೆ 100-250 ರೂ., ಮುತ್ತಿನ ಮಾಲೆ 20-1500 ರೂ., ಖುಲ್ಲಾ ಪ್ಲಾಸ್ಟಿಕ್ ಹೂವು 12 ಪೀಸ್ಗೆ 100 ರೂ. ಹೀಗೆ ನಮ್ಮಲ್ಲಿ 50 ರೂ.ಯಿಂದ 7 ಸಾವಿರ ರೂ.ವರೆಗೆ ಅಲಂಕಾರಿಕ ವಸ್ತುಗಳು ಮಾರಾಟಕ್ಕೆ ಲಭ್ಯ ಇದೆ. ಹೂವಿನ ಮಂಟಪ 2 ಸಾವಿರದಿಂದ 7 ಸಾವಿರ ರೂ.ವರೆಗೆ ದರವಿದೆ. ಇವುಗಳಿಗೆ ಜನ ಹೆಚ್ಚು ಬೇಡಿಕೆ ಇಡುತ್ತಿದ್ದಾರೆ. ಬಹುತೇಕ ಎಲ್ಲ ವಸ್ತುಗಳನ್ನು ಮುಂಬೈನಿಂದ ತಂದಿದ್ದೇವೆ" ಎಂದು ಹೇಳಿದರು.