ಕರ್ನಾಟಕ

karnataka

ETV Bharat / state

ರೈತರ ಬೇಡಿಕೆ, ಹಕ್ಕುಗಳ ಮೇಲೆ ರಾಜ್ಯ ಬಜೆಟ್ ಮಂಡಿಸಲಿ: ಸಚಿವ ಸತೀಶ್‌ಗೆ ರೈತ ಸಂಘ ಮನವಿ

ರೈತರ ಬೇಡಿಕೆ ಹಾಗೂ ಹಕ್ಕುಗಳ ಮೇಲೆ ಸರ್ಕಾರ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ‌ ಸತೀಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.

farmers union leaders Appeal to Minister Satish Jarkiholi
ರೈತ ಸಂಘದ ಮುಖಂಡರು ಸಚಿವ‌ ಸತೀಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು.

By ETV Bharat Karnataka Team

Published : Feb 5, 2024, 4:29 PM IST

Updated : Feb 5, 2024, 7:08 PM IST

ರೈತ ಮುಖಂಡ ಪ್ರಕಾಶ ನಾಯಿಕ ಮಾಧ್ಯಮದವರ ಜೊತೆ ಮಾತನಾಡಿದರು.

ಬೆಳಗಾವಿ:ರಾಜ್ಯ ಸರ್ಕಾರ ರೈತರ ಬೇಡಿಕೆಗಳು ಹಾಗೂ ಹಕ್ಕುಗಳ ಮೇಲೆ ಬಜೆಟ್‌ ಮಂಡಿಸಬೇಕು ಎಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪ್ರತಿಭಟಸಿ‌, ಜಿಲ್ಲಾ ಉಸ್ತುವಾರಿ ಸಚಿವ‌ ಸತೀಶ ಜಾರಕಿಹೊಳಿಗೆ ಮನವಿ ನೀಡಿದರು.

ರಾಜ್ಯದಲ್ಲಿ ರೈತರ ಬದುಕು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ತತ್ತರಿಸಿದೆ. ಕಳೆದೊಂದು ವರ್ಷದಿಂದ ಭೀಕರ ಬರಗಾಲ ಎದುರಾಗಿದೆ‌. ರೈತರಿಗೆ ಸರ್ಕಾರ ಒಂದು ಎಕರೆ ಜಮೀನಿಗೆ 30 ಸಾವಿರ ರೂ. ಪರಿಹಾರ ಘೋಷಣೆ ಮಾಡಬೇಕು. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಸಾಲಮನ್ನಾ ಮಾಡುವ ಜವಾಬ್ದಾರಿಯನ್ನು ಎಲ್ಲ ಶಾಸಕರು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಶಾಸಕರೇ ಹೊಣೆಗಾರರಾಗುತ್ತಾರೆ ಎಂದು ಮನವಿಯಲ್ಲಿ ರೈತ ಮುಖಂಡರು ಎಚ್ಚರಿಕೆ ನೀಡಿದರು.

ರೈತ ಮುಖಂಡ ಪ್ರಕಾಶ ನಾಯಿಕ ಮಾತನಾಡಿ, ‌"ಹಳ್ಳಿಗಳಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ನಿರಂತರ 12 ಗಂಟೆ (3-ಫೇಸ್) ಮತ್ತು ರಾತ್ರಿ ಹೊತ್ತು ನಿರಂತರ ವಿದ್ಯುತ್ ಪೂರೈಸಬೇಕು. ಕೃಷಿ ವಿದ್ಯುತ್ ಯಂತ್ರಗಳಿಗೆ (ಪಂಪ್‌ಸೆಟ್) ಸಂಪರ್ಕ ಕಲ್ಪಿಸುವ ಸಾಮಗ್ರಿಗಳ ಸಂಪೂರ್ಣ ಖರ್ಚುಗಳನ್ನು ಉಚಿತವಾಗಿ ಸರಕಾರವೇ ಭರಿಸಬೇಕು".

"ರೈತ ವಿರೋಧಿ ಸಂಪೂರ್ಣ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಜವಾಬ್ದಾರಿಯನ್ನು ಶಾಸಕರೇ ಹೊರಬೇಕು. ಇದರ ಜೊತೆಗೆ ರೈತ ಹೋರಾಟಗಾರರ ಮೇಲಿರುವ ಎಲ್ಲ ರೀತಿಯ ಕೇಸುಗಳನ್ನೂ ಹಿಂಪಡೆಯಬೇಕು. ಕಬ್ಬು ಉತ್ಪನ್ನಗಳಿಂದ ಸರ್ಕಾರದ ಬೊಕ್ಕಸಕ್ಕೆ ಜಮೆ ಆಗುತ್ತಿರುವ ಅಬಕಾರಿ ತೆರಿಗೆಯಲ್ಲಿ ರೈತರ ಪಾಲು ಕನಿಷ್ಠ 3,000 ರೂ.ಗಳನ್ನೂ ಒಂದು ಟನ್ ಕಬ್ಬಿಗೆ ರೈತರ ಖಾತೆಗ ಜಮೆ ಮಾಡಬೇಕು. ಸಮಗ್ರ ರೈತರ ಉತ್ಪನ್ನಗಳಿಗೆ ದಲ್ಲಾಳಿಗಳಿಂದ ರೈತರಿಗೆ ವಿವಿಧ ರೀತಿಯಲ್ಲಿ ಆಗುತ್ತಿರುವ ಮೋಸ ತಡೆಯಬೇಕು" ಎಂದು ಒತ್ತಾಯಿಸಿದರು.

"ಡಾ.ಸ್ವಾಮಿನಾಥನ್ ಆಯೋಗದ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರ ಮಂಡಿಸುವ ಬಜೆಟ್‌ನಲ್ಲಿ ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಶುಗರ್ ಕಮಿಷನರ್ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯನ್ನು ಸದೃಢಗೊಳಿಸಬೇಕು" ಎಂದು ಒತ್ತಾಯಿಸಿದರು.

ರೈತ ಸಂಘದ ಪದಾಧಿಕಾರಿಗಳು ಶಾಸಕ ಆಸೀಫ್ ಸೇಠ್ ಅವರಿಗೂ ಮನವಿ ಸಲ್ಲಿಸಿದರು. ರೈತ ಮುಖಂಡ ಚೂನಪ್ಪ ಪೂಜಾರಿ, ಸುರೇಶ ಪರಗನ್ನವರ, ಕಿಶನ್ ನಂದಿ, ರಮೇಶ ವಾಲಿ, ಬಬನ ಮಲೈ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

ಇದನ್ನೂಓದಿ:ಬೆಳಗಾವಿ ಲೋಕ ಕದನಕ್ಕೆ ಅಭ್ಯರ್ಥಿಗಳ ಆಯ್ಕೆ: ಬಿಜೆಪಿ - ಕಾಂಗ್ರೆಸ್ ತಂತ್ರವೇನು?

Last Updated : Feb 5, 2024, 7:08 PM IST

ABOUT THE AUTHOR

...view details