ಬೆಳಗಾವಿ: ರಾಯಬಾಗ ತಾಲೂಕಿನ ಗ್ರಾಮವೊಂದರ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಪ್ರಕರಣದ ಅಪರಾಧಿಗೆ ಬೆಳಗಾವಿಯ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯ ಗಲ್ಲು ಶಿಕ್ಷೆ ಹಾಗೂ 45 ಸಾವಿರ ರೂ. ದಂಡ ವಿಧಿಸಿ ಶುಕ್ರವಾರ ಮಹತ್ವದ ತೀರ್ಪು ಪ್ರಕಟಿಸಿದೆ.
ರಾಯಬಾಗ ತಾಲೂಕಿನ ಗ್ರಾಮವೊಂದರ 39 ವರ್ಷದ ವ್ಯಕ್ತಿಯೇ ಶಿಕ್ಷೆಗೆ ಗುರಿಯಾದವ. ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ 2017ರ ಸೆಪ್ಟೆಂಬರ್ 21ರಂದು ಘಟನೆ ನಡೆದಿತ್ತು. ತನಿಖಾಧಿಕಾರಿ ಸುರೇಶ ಶಿಂಗಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆಟವಾಡುತ್ತಿದ್ದ ಬಾಲಕಿಗೆ ಚಾಕೊಲೇಟ್ ಕೊಡಿಸಿದ ಅಪರಾಧಿ, ಬಾಲಕಿಯನ್ನು ಕಬ್ಬಿನ ಗದ್ದೆಗೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ. ನಂತರ ಬಾಲಕಿಯ ಬಾಯಿ, ಕಣ್ಣು, ಮೂಗಿನಲ್ಲಿ ಮಣ್ಣು ತುಂಬಿ ಕೊಲೆ ಮಾಡಿದ್ದ. ಅಲ್ಲದೇ ಅರ್ಧ ದೇಹವನ್ನು ಮಣ್ಣಿನಲ್ಲಿ ಹೂತು ಪರಾರಿಯಾಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಪುಷ್ಪಲತಾ ಇಂದು ತೀರ್ಪು ಪ್ರಕಟಿಸಿದ್ದಾರೆ. 25 ಸಾಕ್ಷ್ಯಗಳು, 52 ದಾಖಲೆಗಳು ಹಾಗೂ 8 ಮುದ್ದೆಮಾಲುಗಳನ್ನು ನ್ಯಾಯಾಧೀಶರು ಪರಿಗಣಿಸಿದ್ದಾರೆ. ಬಾಲಕಿಯ ಪಾಲಕರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ 3 ಲಕ್ಷ ರೂ. ಪರಿಹಾರ ಪಡೆಯಲು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣ ಸಿಬಿಐ ತನಿಖೆಗೆ ಕೋರಿ ಹೈಕೋರ್ಟ್ಗೆ ಸ್ನೇಹಮಯಿ ಕೃಷ್ಣ ಅರ್ಜಿ - Snehamayi Krishna Petition