ಬೆಳಗಾವಿ:ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ವೇಳೆ ಆಕರ್ಷಕ ಬೆಳಕಿನಲ್ಲಿ ಮಿಂದೆದ್ದ ಬೆಳಗಾವಿ, ಈಗ ಚಳಿಗಾಲದ ಅಧಿವೇಶನ ಮತ್ತು ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೈಸೂರು ದಸರಾ ದೀಪಾಲಂಕಾರವನ್ನು ನೆನಪಿಸುವಂತಿದೆ.
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸಂಭ್ರಮ ದ್ವಿಗುಣಗೊಂಡಿದೆ. ಒಂದೆಡೆ ವಿಧಾನಮಂಡಲ ಅಧಿವೇಶನ, ಮತ್ತೊಂದೆಡೆ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಕ್ಕೆ ಕುಂದಾನರಿ ಸಜ್ಜಾಗಿದೆ. ಈ ಎರಡೂ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನಗರಿ ಮದುವಣಗಿತ್ತಿಯಂತಿದೆ.
ನಾಳೆಯಿಂದ 9 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿರುವ ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸುವರ್ಣ ವಿಧಾನಸೌಧ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದರೆ, ಬೆಳಗಾವಿ ನಗರದ ಹೃದಯ ಭಾಗ ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ ಸೇರಿ 30 ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ಮೈಸೂರು ದಸರಾ ವೇಳೆ ದೀಪಾಲಂಕಾರ ಮಾಡುವ ತಂಡವೇ ಬೆಳಗಾವಿಯಲ್ಲೂ ವರ್ಣರಂಜಿತ, ಅಲಂಕಾರಿಕ ದೀಪಗಳಿಂದ ಬೆಳಗಾವಿ ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳನ್ನು ಅಲಂಕರಿಸಿದೆ.