ಬೆಳಗಾವಿ: ಬೆಳಗಾವಿಯಲ್ಲಿ ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಣೆಯಾಗಿದ್ದ ಮಗು ಮೊನ್ನೆ ತಡರಾತ್ರಿ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
30 ದಿನದ ಹೆಣ್ಣು ಮಗುವನ್ನು ಕೇವಲ 60 ಸಾವಿರಕ್ಕೆ ನಕಲಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎಂಬವರು ನರ್ಸ್ ಮಹಾದೇವಿ ಎಂಬ ಮಹಿಳೆಗೆ ಮಾರಾಟ ಮಾಡಿದ್ದರು. ಮಗು ಪಡೆದು ಬೆಳಗಾವಿಗೆ ಬಂದು ಮಾರಾಟ ಮಾಡುವಾಗ ಮಹಾದೇವಿ ಸಿಕ್ಕಿ ಬಿದ್ದಿದ್ದರು. ಈ ವೇಳೆ ಮಗುವನ್ನು ರಕ್ಷಿಸಿ, ಜಿಲ್ಲಾಸ್ಪತ್ರೆಯ ಚಿಕ್ಕ ಮಕ್ಕಳ ನಿಗಾ ಘಟಕದಲ್ಲಿ ಆರೈಕೆಗೆ ಇರಿಸಲಾಗಿತ್ತು. ಬೆಳವಣಿಗೆ ಕುಂಠಿತ ಹಾಗೂ ತೂಕ ಹೆಚ್ಚಳವಾಗದೆ ಅನಾರೋಗ್ಯದಿಂದ ಮಗು ಸಾವನ್ನಪ್ಪಿದೆ.
ಸಂಪ್ರದಾಯದಂತೆ ಪೊಲೀಸರು ಹಾಗೂ ಮಗುವಿನ ತಂದೆ ತಾಯಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸದಾಶಿವ ನಗರದ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಮಗುವಿನ ಅಂತ್ಯ ಸಂಸ್ಕಾರವನ್ನು ಮಾಳಮಾರುತಿ ಪೊಲೀಸರು ನೆರವೇರಿಸಿದ್ದಾರೆ.
ಪ್ರಕರಣದಲ್ಲಿನ ಇಬ್ಬರು ಆರೋಪಿಗಳು ಪ್ರೇಮಿಗಳಅಗಿದ್ದು ಮದುವೆಗೂ ಮುನ್ನವೇ ದೈಹಿಕ ಸಂಪರ್ಕ ಹೊಂದಿದ್ದರಿಂದ ಆ ಮಗು ಜನಿಸಿತ್ತು. 7 ತಿಂಗಳ ಹಸುಳೆಯನ್ನು 20 ಸಾವಿರ ರೂ. ಪಡೆದು ನಕಲಿ ವೈದ್ಯ ಆಪರೇಷನ್ ಮಾಡಿದ್ದರು. ಕೆಲ ಕಾಲ ತಮ್ಮ ಬಳಿ ಇಟ್ಟುಕೊಂಡು ಪೋಷಿಸಿ ನಂತರ ಮಗುವನ್ನು ಮಾರಾಟ ಮಾಡಿದ್ದರು. ಆದರೆ, ನಕಲಿ ವೈದ್ಯ ಹಾಗೂ ಮಾರಾಟ ಜಾಲದ ಹಣದಾಸೆಗೆ ಕಂದಮ್ಮ ಬಲಿಯಾಗಿದೆ. ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.