ಬೆಂಗಳೂರು: ಜಮೀನು ಸ್ವಾಧೀನ ಪಡಿಸಿಕೊಂಡ ಬಳಿಕ ವ್ಯಕ್ತಿಯೊಬ್ಬರಿಗೆ 21 ವರ್ಷ ಕಾನೂನು ಹೋರಾಟ ನಡೆಸಿದರೂ ಪರಿಹಾರ ಮಂಜೂರು ಮಾಡದ ಬಿಡಿಎ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದ ಸರ್.ಎಂ. ವಿಶ್ವೇಶ್ವರಯ್ಯ 7ನೇ ಹಂತದ ಬಡಾವಣೆ ರಚನೆಗಾಗಿ 2003ರಲ್ಲಿ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 15 ಗುಂಟೆ ಜಮೀನಿಗೆ ಪರಿಹಾರವಾಗಿ 1.80 ಕೋಟಿ ರು. ಬೆಲೆಯ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವುದಾಗಿ ಭರವಸೆ ನೀಡಿದೆ.
ಬೆಂಗಳೂರು ಉತ್ತರ ತಾಲೂಕಿನ ಯಶವಂತಪುರ ಹೋಬಳಿಯ ಗಿಡದಕೊನೇನಹಳ್ಳಿಯಲ್ಲಿ ತನಗೆ ಸೇರಿದ 15 ಗುಂಟೆ ಜಮೀನನ್ನು 2003ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಬಿಡಿಎ ಕ್ರಮ ಪ್ರಶ್ನಿಸಿ ನಗರದ ಮುದ್ದಯ್ಯನಪಾಳ್ಯದ ನಿವಾಸಿ ಮುದ್ದೇಗೌಡ (60) ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ.ಜೆ.ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಬಿಡಿಎ ಆಯುಕ್ತ ಎನ್. ಜಯರಾಮ್ ಪ್ರಮಾಣಪತ್ರ ಸಲ್ಲಿಸಿ ಈ ಭರವಸೆಯನ್ನು ನೀಡಿದ್ದಾರೆ.
ಅರ್ಜಿಯನ್ನು ಫೆ.13ರಂದು ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, "ಅರ್ಜಿದಾರರ 15 ಗುಂಟೆ ಜಮೀನನ್ನು 2003ರಲ್ಲಿ ಸ್ವಾಧೀನಪಡಿಸಿಕೊಂಡಿರುವುದಾಗಿ ಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. 21 ವರ್ಷಗಳಾದರೂ ಪರಿಹಾರ ನೀಡಿಲ್ಲ ಎಂದರೆ ಹೇಗೆ? ಈ ವಿಚಾರವಾಗಿ ಅರ್ಜಿದಾರರನ್ನು ಸುಮಾರು ಕಾಲು ಶತಮಾನದಷ್ಟು ಸಮಯ ಬಿಡಿಎ ಕಚೇರಿಗೆ ಅಲೆಯುವಂತೆ ಮಾಡಲಾಗಿದೆ. ಸುಗ್ರೀವಾಜ್ಞೆ ಮೂಲಕ ಬಿಡಿಎ ಅನ್ನು ಮುಚ್ಚಲು ಆದೇಶಿಸುವುದೇ ಲೇಸು" ಎಂದು ಬೇಸರ ವ್ಯಕ್ತಪಡಿಸಿತ್ತು. ಜತಗೆ, ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸುವಂತೆ ಬಿಡಿಎ ಆಯುಕ್ತರಿಗೆ ಸೂಚಿಸಿ, ವಿಚಾರಣೆ ಮುಂದೂಡಿತ್ತು.