ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರ್ಮಾಣವಾದ ಪ್ರತಿಯೊಂದು ವಸತಿ ಸಂಕೀರ್ಣವು ಒಂದು ವರ್ಷದೊಳಗೆ ತನ್ನದೇ ಆದ ಸಂಘ ಸ್ಥಾಪಿಸಿಕೊಳ್ಳಬೇಕು ಮತ್ತು ನಿರ್ವಹಣೆಯ ಚಟುವಟಿಕೆ ನೋಡಿಕೊಳ್ಳಬೇಕು ಎಂದು ಬಿಡಿಎ ಆದೇಶಿಸಿದೆ.
ಬಿಡಿಎ ಡಿಸೆಂಬರ್ 1ರಿಂದ ಫ್ಲ್ಯಾಟ್‌ಗಳ ಮಾರಾಟದ ಸಮಯದಲ್ಲಿ ಅದರ ಸಂಪೂರ್ಣ ವೆಚ್ಚದೊಂದಿಗೆ ಒಂದು ವರ್ಷದ ನಿರ್ವಹಣಾ ಶುಲ್ಕ ಸೇರಿಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಆಂತರಿಕ ಆದೇಶವನ್ನು ಬಿಡಿಎ ಆಯುಕ್ತ ಎನ್. ಜಯರಾಮ್ ಹೊರಡಿಸಿದ್ದಾರೆ.
ಪ್ರತಿಯೊಂದು ವಸತಿ ಸಂಕೀರ್ಣವು ಒಂದು ವರ್ಷದೊಳಗೆ ತನ್ನದೇ ಆದ ಸಂಘ ಸ್ಥಾಪಿಸಬೇಕು ಮತ್ತು ನಿರ್ವಹಣೆ ಚಟುವಟಿಕೆಗಳನ್ನು ನೋಡಿಕೊಳ್ಳಬೇಕು. ಇದನ್ನು ಪಾಲಿಸದಿದ್ದರೆ, ಬಿಡಿಎ ನಿರ್ವಹಣಾ ಶುಲ್ಕ ಸಂಗ್ರಹಿಸುವುದನ್ನು ಮುಂದುವರೆಸುತ್ತದೆ ಎಂದು ತಿಳಿಸಲಾಗಿದೆ.
ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಬಿಡಿಎ ಪಾವತಿಸಬೇಕಾದ ಶೇಕಡ 3ರಷ್ಟು ಕಮಿಷನ್ ಅನ್ನು ಖರೀದಿದಾರರು ಫ್ಲ್ಯಾಟ್ನ ಸಂಪೂರ್ಣ ವೆಚ್ಚ ಪಾವತಿಸಿದ ಬಳಿಕ ಅವರಿಗೆ ಪಾವತಿಸಲಾಗುವುದು. ಒಂದು ಕಾಂಪ್ಲೆಕ್ಸ್ನ ಎಲ್ಲಾ ಫ್ಲಾಟ್ ಹಂಚಿಕೆದಾರರು ಸಾಧ್ಯವಾದಷ್ಟು ಬೇಗ ಸಂಘವನ್ನು ರಚಿಸಬೇಕು ಮತ್ತು ನಿರ್ವಹಣಾ ಚಟುವಟಿಕೆಗಳನ್ನು ತೆಗೆದುಕೊಳ್ಳಬೇಕು ಎಂದಿದೆ.
ಇದನ್ನೂ ಓದಿ:ಸರ್ಕಾರಿ, ಖಾಸಗಿ ಸಹಭಾಗಿತ್ವದಲ್ಲಿ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ: ಸಚಿವ ಡಾ.ಎಂ.ಸಿ.ಸುಧಾಕರ್
ಉದ್ಯಾನ, ಲಿಫ್ಟ್, ಕೊಳಚೆ ನೀರು ಸಂಸ್ಕರಣಾ ಘಟಕ ಹೀಗೆ ಸಾಮಾನ್ಯ ಪ್ರದೇಶವನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾಗಿದ್ದು, ಇದಕ್ಕೆ ಹಣದ ಅಗತ್ಯವಿದೆ. ಅದನ್ನು ಫ್ಲಾಟ್ ವೆಚ್ಚದೊಂದಿಗೆ ಮುಂಚಿತವಾಗಿ ಸಂಗ್ರಹಿಸಿದರೆ, ನಿಯಮಿತ ನಿರ್ವಹಣಾ ಕಾರ್ಯ ನಿರ್ವಹಿಸುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಅಸೋಸಿಯೇಷನ್ ರಚನೆಯಾಗುವವರೆಗೆ, ನಿರ್ವಹಣೆಯ ಪಾವತಿಗಾಗಿ ನಿಯಮಿತವಾಗಿ ಮಾಲೀಕರನ್ನು ಹಿಂಬಾಲಿಸುವುದು ಬಿಡಿಎಗೆ ಕಷ್ಟವಾಗಿದೆ. ಅನೇಕ ಮಾಲೀಕರು ತಮ್ಮ ಫ್ಲಾಟ್ ಖಾಲಿ ಬಿಡುತ್ತಾರೆ ಮತ್ತು ಅವುಗಳನ್ನು ಖರೀದಿಸಿದ ನಂತರ ನಿರ್ವಹಣೆ ಹಣ ಪಾವತಿಸಲು ಚಿಂತಿಸುವುದಿಲ್ಲ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೇಳಿದೆ.
ಇದನ್ನೂ ಓದಿ:ವಿವಿಯಲ್ಲಿನ ಬದಲಾವಣೆ ವಿಷಯದಲ್ಲಿ ನಾವು ಗುಜರಾತ್ ಮಾದರಿ ಅನುಕರಿಸಿದ್ದೇವೆ: ಪರಮೇಶ್ವರ್