ದಾವಣಗೆರೆ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಹಿಂದೆ ಲಿಂಗಾಯತರ ಕೊಡುಗೆ ಇದೆ. ಅದನ್ನು ಸಿಎಂ ಮರೆಯಬಾರದು. ಆ ಋಣ ತೀರಿಸುವ ಪ್ರಯತ್ನ ಮಾಡಿ ಎಂದು ಸಿಎಂ ಸಿದ್ದರಾಮಯ್ಯನವರಿಗೆ ಕೂಡಲಸಂಗಮ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.
ದಾವಣಗೆರೆಯಲ್ಲಿ ಇಂದು ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದರೂ ಕೂಡ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟ ಮುಂದುವರೆದಿದೆ. ಸಿಎಂ ಸ್ಪಂದಿಸಿಲ್ಲ. ನಮ್ಮ ಶಾಸಕರು ಅಧಿವೇಶನದಲ್ಲಿ ಮಾತನಾಡಿಲ್ಲ. ಹೀಗಾಗಿ ರಾಜ್ಯಾದ್ಯಂತ ಸಮಾಜದ ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಸರ್ಕಾರ ಬಂದು ಒಂದು ವರ್ಷ ಕಳೆದಿದೆ. ಸಿಎಂ ಸಭೆ ಕರೆಯಲು ತಯಾರಿಲ್ಲ. ನಮ್ಮ ಶಾಸಕರು ಮಾತನಾಡಲು ಸಿದ್ಧರಿಲ್ಲ. ಆದ್ದರಿಂದ ನಾನೇ ಪ್ರತಿಷ್ಠೆ ಬಿಟ್ಟು ಇಪ್ಪತ್ತು ಜನ ಶಾಸಕರ ಮನೆ ಬಾಗಿಲಿಗೆ ಹೋಗಿ ನೀವು ಒಗ್ಗಟ್ಟಾಗಿ ಮಾತನಾಡಬೇೆಕೆಂದು ಹೇಳಿದ್ದೆ. ಆದರೆ ಅಧಿವೇಶನದಲ್ಲಿ ನಮ್ಮ ಶಾಸಕರಿಗೆ ಮಾತನಾಡಲು ಸ್ಪೀಕರ್ ಅವಕಾಶ ಕೊಡಲಿಲ್ಲ. ಸ್ಪೀಕರ್ ಅವಕಾಶ ಕೊಡ್ತಿಲ್ಲ ಎಂದು ಹೇಳಿದಾಗ ಯತ್ನಾಳ್ ಅವರಿಗೆ ಅವಕಾಶ ಕೊಡಲಾಯಿತು. ಆಗ ವಿಧಾನಸಭೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಎಂದು ಹೇಳಿದರು.