ಚಿತ್ರದುರ್ಗ:ಪ್ರಯಾಗ್ರಾಜ್ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕರ್ನಾಟಕದ ಮತ್ತೊಬ್ಬರು ಮೃತಪಟ್ಟಿದ್ದಾರೆ. ಕಳೆದ ಏಳು ವರ್ಷಗಳಿಂದ ಚಿತ್ರದುರ್ಗ ತಾಲೂಕಿನ ಸಿಬಾರ ಬಳಿ ಇರುವ ಬಂಜಾರ ಗುರುಪೀಠದಲ್ಲಿ ವಾಸವಾಗಿದ್ದ ನಾಗಾಸಾಧು ರಾಜನಾಥ್ ಮಹಾರಾಜ್ (48) ಸಾವನ್ನಪ್ಪಿದ್ದಾರೆ.
ರಾಜನಾಥ್ ಮಹಾರಾಜ್ ಅವರು ಹದಿನೈದು ದಿನಗಳ ಹಿಂದೆಯಷ್ಟೇ ಕುಂಭಮೇಳಕ್ಕೆ ತೆರಳಿದ್ದರು. ಕಾಲ್ತುಳಿತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸಾವಿನ ಸುದ್ದಿ ತಿಳಿದು ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
"ನಾಗಸಾಧುಗಳ ಸಾವಿನ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಆಘಾತವಾಗಿದೆ. ಕಳೆದ ಏಳು ವರ್ಷಗಳಿಂದಲೂ ಮಠದಲ್ಲಿಯೇ ಇದ್ದರು. ಅವರ ಮಾತುಗಳೇ ನಮಗೆ ಪ್ರೇರಣೆ. 15 ದಿನಗಳ ಹಿಂದೆ ಹೋಗುವಾಗ ನಮನ್ನೂ ಆಹ್ವಾನಿಸಿದ್ದರು. ಅವರಿಗೆ ಕನ್ನಡ ಮಾತನಾಡಲು ಬರುತ್ತಿರಲಿಲ್ಲ, ಹಿಂದಿಯಲ್ಲಿಯೇ ಮಾತನಾಡುತ್ತಿದ್ದರು. ನಾಗಾಸಾಧುಗಳು, ಪವಾಡ ಪುರುಷರು ಅಲ್ಲಿಗೆ ಬರುತ್ತಾರೆ, ನಮ್ಮವರು ಸಿಗುತ್ತಾರೆ ಎಂದು ಹೇಳಿ ಹೋಗಿದ್ದರು" ಎಂದರು.