ಬೆಂಗಳೂರು:ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿಶೀಟರ್ ಗಾಳಪ್ಪ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುಷ್ಕರ್ಮಿಗಳ ಗುಂಪೊಂದು ನಿನ್ನೆ ಭಾನುವಾರ ರೌಡಿಶೀಟರ್ ಗಾಳಪ್ಪನನ್ನುಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿ ಪರಾರಿಯಾಗಿತ್ತು. ಐವರು ಆರೋಪಿಗಳ ಪತ್ತೆಗೆ ಸಿಸಿಬಿ ಪೊಲೀಸರು ಜಾಲ ಬೀಸಿದ್ದರು.
ಘಟನೆ ವೇಳೆ ಕೊಲೆಯಾದ ರೌಡಿಶೀಟರ್ ಗಾಳಪ್ಪ ಡ್ರ್ಯಾಗರ್ ಬೀಸಿದ ಪರಿಣಾಮ ಪ್ರಮುಖ ಆರೋಪಿ ಭರತ್ ಕೈ ಕಟ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಭರತನ ಜೊತೆಗಿದ್ದ ಟೈಗರ್ ಮಂಜ, ಮಧು ಹಾಗೂ ಮತ್ತಿಬ್ಬರು ಸೇರಿ ಐವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು,ತನಿಖೆ ಮುಂದುವರಿಸಿದ್ದಾರೆ.
3 ವರ್ಷದ ಹಿಂದಿನ ವೈಷಮ್ಯ:ಕೊಲೆಯಾದ ಗಾಳಪ್ಪ 3 ವರ್ಷದ ಹಿಂದೆ ಭರತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ. ಆ ವೇಳೆ ಭರತ ಮೃತಪಟ್ಟಿದ್ದ ಅಂದುಕೊಂಡಿದ್ದ. ಅದಾದ ಬಳಿಕ ಭರತ್ ಜೀವಂತ ಆಗಿರುವ ಬಗ್ಗೆ ತಿಳಿದುಕೊಂಡಿದ್ದ ಗಾಳಪ್ಪ, ಭರತನ ಜೊತೆಗೆ ರಾಜಿ ಮಾಡಿಕೊಳ್ಳಲು ಪ್ರಯತ್ನಿಸಿದ್ದನು. ಆದರೆ ಭರತ ಮಾತ್ರ ರಾಜಿಗೆ ಒಪ್ಪದೇ ಗಾಳಪ್ಪನ ಮೇಲೆ ಹಗೆ ಸಾಧಿಸಿ ಹತ್ಯೆ ಮಾಡುವುದಕ್ಕಾಗಿ ದಿನವೊಂದನ್ನು ನಿಗದಿಪಡಿಸಿದ್ದನು.