ಬೆಂಗಳೂರು:ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೂ ನಿಜಕ್ಕೂ ಮರಣೋತ್ತರ ಭಾರತ ರತ್ನ ಸಿಗಬೇಕು. ಈ ಗೌರವಕ್ಕೆ ಅವರಂತಹ ಅರ್ಹರು ಮತ್ತೊಬ್ಬರಿಲ್ಲ. ಈ ಹಿಂದೆಯೇ ಅವರಿಗೆ ಈ ಗೌರವ ನೀಡಬೇಕಿತ್ತು ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಶ್ರೀ ಶಿವಕುಮಾರ ಸ್ವಾಮೀಜಿ ಅವರು ಅನ್ನ, ಶಿಕ್ಷಣ ನೀಡಿ ಲಕ್ಷಾಂತರ ಮಂದಿಗೆ ಆಸರೆಯಾಗಿ ನಿಂತ ಮಹಾತ್ಮರು ಎನಿಸಿದ್ದಾರೆ. ಸಿದ್ಧಗಂಗಾ ಶ್ರೀಗಳು ಇಡೀ ದೇಶಕ್ಕೇ ಮಾದರಿ ಆಗಿದ್ದವರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಿಂಗೈಕ್ಯ ಶ್ರೀಗಳಿಗೆ ಆದ್ಯತೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಒತ್ತಾಯಿಸಿದ್ದಾರೆ.
ಶಿವಕುಮಾರ ಸ್ವಾಮೀಜಿ ಶತಮಾನ ಕಂಡ ಅಪರೂಪದ ಶರಣರು:ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಈ ಶತಮಾನ ಕಂಡ ಅಪರೂಪದ ಶರಣರಾಗಿದ್ದವರು. ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನ ದಾಸೋಹ ಮೂಲಕ ತ್ರಿವಿಧ ದಾಸೋಹವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮಾಡಿದವರು. ಯಾವುದೇ ಜಾತಿ, ಧರ್ಮ ಭೇದ ಮಾಡಿದವರಲ್ಲ. ಎಲ್ಲರೂ ಒಂದೇ ಎಂಬ ರೀತಿಯಲ್ಲಿ ಸಹಾಯ ಬೇಡಿ ಬಂದ ಲಕ್ಷಾಂತರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ, ಆಹಾರ ನೀಡಿ ಸಮಾಜದಲ್ಲಿ ಒಂದು ಉತ್ತಮ ಸ್ಥಾನವನ್ನು ಹಾಗೂ ಹೆಸರು ಗಳಿಸುವಂತೆ ಮಾಡಿದವರು ಅವರು ಎಂದು ವಿವರಣೆ ನೀಡಿದ್ದಾರೆ.