ಬೆಂಗಳೂರು:ಲೋಕಸಭಾ ಚುನಾವಣೆಗೆ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಸಂಸದ ಕರಡಿ ಸಂಗಣ್ಣ ಮನವೊಲಿಕೆ ಮಾಡುವಲ್ಲಿ ರಾಜ್ಯ ಬಿಜೆಪಿ ನಾಯಕರು ಸಫಲರಾಗಿದ್ದು, ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಕರಡಿ ಸಂಗಣ್ಣ ಒಪ್ಪಿಗೆ ಸೂಚಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕರಡಿ ಸಂಗಣ್ಣ ಮನವೊಲಿಕೆ ಕಾರ್ಯ ನಡೆಯಿತು. ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಕೆಟ್ ವಂಚಿತ ಸಂಸದ ಕರಡಿ ಸಂಗಣ್ಣ ಸೇರಿದಂತೆ ಜಿಲ್ಲಾ ನಾಯಕರು ಉಪಸ್ಥಿತರಿದ್ದರು.
ಕೊಪ್ಪಳ ಟಿಕೆಟ್ ಕೈ ತಪ್ಪಿದ್ದಕ್ಕೆ ಆಕ್ರೋಶಗೊಂಡಿದ್ದ ಕರಡಿ ಸಂಗಣ್ಣ ಅವರನ್ನು ಸಮಾಧಾನಪಡಿಸಿದರು. ಸೂಕ್ತ ಜವಾಬ್ದಾರಿ ಭರವಸೆ ನೀಡಿ ಸಂಧಾನ ಕಾರ್ಯ ನಡೆಸಿದರು. ರಾಜ್ಯ ನಾಯಕರ ಸಂಧಾನಕ್ಕೆ ಒಪ್ಪಿದ ಕರಡಿ ಸಂಗಣ್ಣ ಪಕ್ಷದ ಪರವಾಗಿ ಕೆಲಸ ಮಾಡುವ ಘೋಷಣೆ ಮಾಡಿದರು.
ಸಭೆ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಕರಡಿ ಸಂಗಣ್ಣ ಅಸಮಾಧಾನ ವಿಚಾರ ಸಂಬಂಧ ಪಕ್ಷದ ಹಿರಿಯರು ಎಲ್ಲರೂ ಬಂದಿದ್ದರು. ಮೊದಲನೇ ಹಂತದಲ್ಲಿ ಎಲ್ಲ ಚರ್ಚೆ ಆಗಿದೆ. ಅವರ ಭಾವನೆಗಳನ್ನು ಎಲ್ಲವನ್ನೂ ಕೇಳಿದ್ದಾರೆ, ಏನೇ ಆದರೂ ಪಕ್ಷದ ಜೊತೆಗೆ ನಿಂತು ಕೆಲಸ ಮಾಡಬೇಕು ಅಂತ ಯಡಿಯೂರಪ್ಪ ಸಹ ಹೇಳಿದ್ದಾರೆ. ಅಂತಿಮವಾಗಿ ಹೈಕಮಾಂಡ್ ನಾಯಕರು ಜವಾಬ್ದಾರಿ ಸಂಬಂಧಿಸಿದಂತೆ ತೀರ್ಮಾನ ಮಾಡ್ತಾರೆ ಎನ್ನುವ ಭರವಸೆ ನೀಡಿ ಸೌಹಾರ್ದಯುವಾಗಿ ಸಭೆ ಆಗಿದೆ.
ಕರಡಿ ಸಂಗಣ್ಣ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಜವಾಬ್ದಾರಿ ನೀಡುವ ಬಗ್ಗೆ ಚರ್ಚೆ ಆಗಿದೆ. ಯಡಿಯೂರಪ್ಪ ಸಹ ಕರಡಿ ಸಂಗಣ್ಣನವರಿಗೆ ಸೂಕ್ತ ಜವಾಬ್ದಾರಿ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಹಾಗಾಗಿ ಅಸಮಾಧಾನ ಶಮನವಾಗಿದೆ ಎಂದು ತಿಳಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಯಡಿಯೂರಪ್ಪ, ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಎಲ್ಲ ವಿವರ ಕೇಳಲಾಗಿದೆ. ಸಂಗಣ್ಣ ಅವರಿಗೆ ಪಕ್ಷದ ವತಿಯಿಂದ ಕೆಲಸ ಮಾಡಿ ಕೊಡುವ ನಿರ್ಧಾರ ಮಾಡಲಾಗಿದೆ. ಪಕ್ಷದ ನಿರ್ಣಯ ಒಪ್ಪಿದ್ದಾರೆ. ಸಂಗಣ್ಣ ಅವರಿಗೆ ಟಿಕೆಟ್ ಸಿಗದಿದ್ದರೂ ಶಾಂತಿಯುತವಾಗಿ ಬಂದು ಚರ್ಚೆ ಮಾಡಿದ್ದಾರೆ. ಬಿಜೆಪಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದರು.
ಸಂಸದ ಕರಡಿ ಸಂಗಣ್ಣ ಮಾತನಾಡಿ, ಲೋಕಸಭಾ ಚುನಾವಣೆ ಟಿಕೆಟ್ ಮಿಸ್ ಆಗಿರೋ ಹಿನ್ನೆಲೆಯಲ್ಲಿ ಎಲ್ಲ ಹಿರಿಯರು, ಕಾರ್ಯಕರ್ತರು ಮುಖಂಡರಿಗೆ ಪ್ರಶ್ನೆ ಮಾಡಿದ್ದರು. ನಮ್ಮ ಸುಪ್ರೀಂ ನಾಯಕ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ಜೋಶಿ ಎಲ್ಲರೂ ಸಮಸ್ಯೆ ಆಲಿಸಿದ್ದಾರೆ. ಪಕ್ಷದ ಬೆಳವಣಿಗೆ ದೃಷ್ಟಿಯಿಂದ ನಮ್ಮ ಗುರಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗೋದು. ಏನೇ ಇದ್ದರೂ ಸರಿದೂಗಿಸಿಕೊಂಡು ಹೋಗ್ತೀನಿ. ಬಸವರಾಜ್ ಕ್ಯಾವಟೂರ್ ಒಂದು ಭಾಗ. ಅದರ ಬಗ್ಗೆ ನಾನು ಮಾತನಾಡಲ್ಲ. ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂಓದಿ:ಕೆಆರ್ಪಿಪಿ ಬಿಜೆಪಿಯೊಂದಿಗೆ ವಿಲೀನ: ಕಲ್ಯಾಣದಲ್ಲಿ ಕಮಲ ಅರಳಿಸಲಿದ್ದಾರಾ ಜನಾರ್ದನ ರೆಡ್ಡಿ? - Lok Sabha Election