ಬೆಂಗಳೂರು:ದುಷ್ಕರ್ಮಿಗಳ ಗಂಪೊಂದುಮಾರಕಾಸ್ತ್ರಗಳಿಂದ ಹೊಡೆದು ರೌಡಿಯನ್ನು ಹತ್ಯೆಗೈದಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕೇಗೌಡನಪಾಳ್ಯದಲ್ಲಿ ನಡೆದಿದೆ. ಗಾಳಪ್ಪ ಎಂಬಾತ ಹತ್ಯೆಗೀಡಾದ ರೌಡಿ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ಮುಂದುವರಿಸಿದ್ದಾರೆ.
ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ರೌಡಿ ಗಾಳಪ್ಪ ವಿರುದ್ಧ ಕೆಂಗೇರಿ ಹಾಗೂ ತಾವರೆಕೆರೆ ಪೊಲೀಸ್ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಇಂದು ಚಿಕ್ಕೇಗೌಡನ ಪಾಳ್ಯಕ್ಕೆ ಬಂದಿದ್ದ ವೇಳೆ, ಗಾಳಪ್ಪನ ಮೇಲೆ ಏಕಾಏಕಿ ದಾಳಿ ಮಾಡಿದ ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದೆ. ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ, ರೌಡಿ ಹತ್ಯೆ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ.
ಪ್ರತ್ಯೇಕ ಪ್ರಕರಣ- ಸ್ನೇಹಿತನನ್ನು ಹತ್ಯೆಗೈದಿದ್ದ ಐವರು ಆರೋಪಿಗಳ ಬಂಧನ:ಮನೆ ಮುಂದೆ ಸ್ನೇಹಿತನನ್ನು ಹತ್ಯೆಗೈದಿದ್ದ ಐವರು ಆರೋಪಿಗಳನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ರಾತ್ರಿ ದರ್ಶನ್ ಎಂಬಾತನ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದು ಹತ್ಯೆಗೈದಿದ್ದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಎಂಬುವರನ್ನು ಬಂಧಿಸಲಾಗಿದೆ.
ದರ್ಶನ್ ತಾಯಿಗೆ ಕೊಡುವಂತೆ 3 ಸಾವಿರ ಹಣವನ್ನು ಆತನ ದೊಡ್ಡಮ್ಮ ನೀಡಿದ್ದಳು. ಆದರೆ ಆ ಹಣವನ್ನು ತೆಗೆದುಕೊಂಡು ದರ್ಶನ್ ತನ್ನ ಸ್ನೇಹಿತ ನಿತಿನ್, ರಮೇಶ್ ಜೊತೆಗೆ ಬಾರ್ಗೆ ತೆರಳಿದ್ದ. ಅದೇ ಬಾರ್ಗೆ ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಬಂದಿದ್ದರು. ಎಲ್ಲರೂ ಸ್ನೇಹಿತರೇ. ಆದರೆ ಪಾರ್ಟಿ ಮಧ್ಯೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆ ನಡೆದಿತ್ತು.
ಬಳಿಕ ದರ್ಶನ್ ಹಾಗೂ ನಿತಿನ್ ಸ್ನೇಹಿತ ರಮೇಶ್ ಮನೆ ಬಳಿ ಬಂದಿದ್ದರು. ಪ್ರೀತಂ ಹಾಗೂ ಆರೋಪಿಗಳ ತಂಡ ಸಹ ರಮೇಶ್ ಮನೆ ಬಳಿ ಬಂದಿತ್ತು. ಈ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆಯಾಗಿತ್ತು. ಆಗ ನಿತಿನ್ಗೆ ಪ್ರೀತಂ ಹೊಡೆದಿದ್ದಾನೆ. ಮಧ್ಯಪ್ರವೇಶಿಸಿದ್ದ ದರ್ಶನ್, ನಿತಿನ್ಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಾನೆ. ಸಿಟ್ಟಿಗೆದ್ದ ಪ್ರೀತಂ 'ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು' ಎಂದು ದರ್ಶನ್ ತಲೆ ಮೇಲೆ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದಿದ್ದನು. ತೀವ್ರವಾಗಿ ಗಾಯಗೊಂಡಿದ್ದ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಘಟನೆಯ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಪ್ರಮುಖ ಆರೋಪಿ ಪ್ರೀತಂ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂಓದಿ:ಕಸಕ್ಕೆ ಬೆಂಕಿ ಕೊಡಲು ಹೋದ ವೇಳೆ ಭಾರಿ ಅವಘಡ: ಬಂಟ್ವಾಳದಲ್ಲಿ ದಂಪತಿ ಸಜೀವದಹನ