ಬೆಂಗಳೂರು:ವಿಶ್ವ ಶ್ರವಣ ದಿನಾಚರಣೆ ಪ್ರಯುಕ್ತ ನಗರದ ಜೆ ಪಿ ನಗರದ ನೂತನ ಎರಡನೇ ಹಂತದ ನಾಯಕ್ಸ್ ಸ್ಪೀಚ್ ಅಂಡ್ ಹಿಯರಿಂಗ್ ಕ್ಲಿನಿಕ್ ಉದ್ಘಾಟನೆ ಹಾಗೂ ಶ್ರವಣ ಉಚಿತ ತಪಾಸಣೆ ಶಿಬಿರ ಭಾನುವಾರ ನಡೆಯಿತು.
ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯೆ ಹಾಗೂ ದಿವ್ಯಾಂಗ ಅಸೋಸಿಯೇಷನ್ ಸದಸ್ಯೆ ಡಾ ಮಂಗಳ ಶ್ರೀಧರ, ಶ್ರವಣ ತಜ್ಞ ಪುರುಷೋತ್ತಮ, ವಾಲ್ಮೀಕಿ ನಾಯಕ ಮಹಾಸಭಾ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್, ನಾಯಕ್ಸ್ ಸ್ಪೀಚ್ ಎಂಡ್ ಹಿಯರಿಂಗ್ ಕ್ಲಿನಿಕ್ ಮುಖ್ಯಸ್ಥ ಎಂ.ಎಸ್.ಜೆ ನಾಯಕ ಹಾಗೂ ಎನ್ರಿಚ್ ರಿಹ್ಯಾಬಿಲಿಟೇಷನ್ ಟ್ರಸ್ಟ್ ಮುಖ್ಯಸ್ಥ ಮೋಹನ್ ಕುಮಾರ್ ಅವರು ಶ್ರವಣ ಉಚಿತ ತಪಾಸಣೆ ಶಿಬಿರದಲ್ಲಿ ಭಾಗವಹಿಸಿದ್ದರು.
ಈ ವೇಳೆ ಶ್ರವಣ ತಜ್ಞ ಪುರುಷೋತ್ತಮ ಮಾತನಾಡಿ, ಶ್ರವಣ ದೋಷದ ನಿವಾರಣೆ ಹಾಗೂ ಜಾಗೃತಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯೂ ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ಶ್ರವಣ ದಿನ ಆಚರಿಸುತ್ತಿದೆ. ಮಕ್ಕಳ ಶ್ರವಣ ಸಹಿತ ಕಿವಿ ಸಮಸ್ಯೆಯನ್ನು ಆರಂಭದ ಎರಡು ವರ್ಷಗಳಲ್ಲಿ ಪತ್ತೆ ಹಚ್ಚಿದರೆ, ಮಗು ಮಾತು ಕಲಿಯಲು ಹಾಗೂ ಆರೋಗ್ಯಕರ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.