ಕರ್ನಾಟಕ

karnataka

ETV Bharat / state

ಬೆಂಗಳೂರು: ನೀರಿನ ಅಭಾವ, ಬಾಳೆ ಎಲೆಗೆ ಹೆಚ್ಚಿದ ಬೇಡಿಕೆ - Banana Leaves

ಬೆಂಗಳೂರಿನಲ್ಲಿ ಹೆಚ್ಚಿನ ಜನರು ನೀರಿನ ಬಳಕೆ ಕಡಿಮೆ ಮಾಡಲು ಬಳಸಿ ಬಿಸಾಡುವ ತಟ್ಟೆ, ಲೋಟಗಳ ಜತೆಗೆ ಬಾಳೆ ಎಲೆಗಳ ಮೊರೆ ಹೋಗುತ್ತಿದ್ದಾರೆ.

ಬಾಳೆ ಎಲೆ
ಬಾಳೆ ಎಲೆ

By ETV Bharat Karnataka Team

Published : Apr 11, 2024, 9:58 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಿಸಿಲ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಕುಡಿಯುವ ನೀರಿನ ಸಮಸ್ಯೆ, ಎಳನೀರಿನ ಅಭಾವದ ನಂತರ ನಗರಿಗರು ಇದೀಗ ಬಾಳೆ ಎಲೆಯ ಅಭಾವವನ್ನೂ ಎದುರಿಸುವ ಪರಿಸ್ಥಿತಿ ಬಂದಿದೆ.

ರಾಜಧಾನಿಯ ಹಲವು ಭಾಗದಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಅನೇಕ ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಟೀಲ್ ತಟ್ಟೆಗಳನ್ನು ನೀಡುವ ಬದಲು ಬಾಳೆ ಎಲೆಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ, 3 ರೂಪಾಯಿಗೆ ಸಿಗುತ್ತಿದ್ದ ಬಾಳೆ ಎಲೆಯ ದರ 13 ರೂಪಾಯಿ ತಲುಪಿದೆ.

ನಗರದಲ್ಲಿ ನೀರಿನ ಕೊರತೆಯಿಂದಾಗಿ ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದೆ. ನೀರಿನ ಬಳಕೆಗೆ ಪರ್ಯಾಯವಾಗಿ ಜನರು ಬಳಸಿ ಬಿಸಾಡುವ ತಟ್ಟೆ, ಲೋಟಗಳತ್ತ ಚಿತ್ತ ಹರಿಸಿದ್ದಾರೆ. ಇದರ ನಡುವೆ ಸಾಂಪ್ರದಾಯಿಕ ಊಟದ ಶೈಲಿಯಾದ ಬಾಳೆ ಎಲೆಗಳನ್ನು ಊಟೋಪಹಾರಗಳಿಗೆ ಬಳಸಲು ಮುಂದಾಗಿರುವುದರಿಂದ ನಗರದಲ್ಲಿ ಬಾಳೆ ಎಲೆಗಳಿಗೆ ಬೇಡಿಕೆ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇದರೊಂದಿಗೆ ಪೂರೈಕೆ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.

ಬಾಳೆ ಎಲೆ

ನಗರದ ಮಲ್ಲೇಶ್ವರ, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ ಮಾರುಕಟ್ಟೆಗಳಲ್ಲಿ ಬಾಳೆ ಎಲೆಗೆ ಭಾರೀ ಬೇಡಿಕೆ ಇದೆ. ಬಾಳೆ ಎಲೆ ಮತ್ತು ಬಳಸಿ ಬಿಸಾಡುವ ಪ್ಲೇಟ್‌ಗಳ ಮಾರಾಟ ಶೇ.40ಕ್ಕಿಂತ ಹೆಚ್ಚಳವಾಗಿದೆ. ಬಾಳೆಎಲೆಯನ್ನು ರಾಜ್ಯ ಹಾಗೂ ನೆರೆ ರಾಜ್ಯಗಳ ವಿವಿಧ ತಾಲೂಕುಗಳಿಂದ ತರಿಸಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಚಾಮರಾಜನಗರ, ಮೈಸೂರು, ತಮಿಳುನಾಡು, ಇಂದುಪುರ ಹಾಗೂ ಕಡಪಾದಿಂದ ಪೂರೈಕೆಯಾಗುತ್ತಿದೆ. ಈಗಿನ ಬೇಡಿಕೆಗೆ ಪೂರೈಕೆ ಸಾಕಾಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಬಾಳೆ ಎಲೆ 3 ರೂಪಾಯಿ, 6 ರೂಪಾಯಿ, ದೊಡ್ಡ ಎಲೆ 8ರಿಂದ 10 ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದವು. ಎಲೆಗಳ ಗಾತ್ರದ ಮೇಲೆ ಬೆಲೆ ನಿಗದಿಯಾಗುತ್ತಿತ್ತು. ಆದರೆ, ಕಳೆದೊಂದು ತಿಂಗಳಿಂದ ಒಂದು ಎಲೆಯನ್ನು 9ರಿಂದ 13 ರೂಪಾಯಿಯವರೆಗೆ ಮಾರಾಟ ಮಾರಾಟ ಮಾಡುತ್ತಿದ್ದೇವೆ. ಆರು ಎಲೆಗಳ ಸೆಟ್‌ಗೆ 70 ರೂಪಾಯಿ ತೆಗೆದುಕೊಳ್ಳುತ್ತಿದ್ದೇವೆ ಎಂದು ಮಲ್ಲೇಶ್ವರದ ಎಲೆಗಳ ವ್ಯಾಪಾರಿ ಸುನಿಲ್ ಎಂಬವರು ಮಾಹಿತಿ ನೀಡಿದರು.

ಇದನ್ನೂ ಓದಿ:ಬಿರು ಬೇಸಿಗೆಗೆ ಸರಿಯಾದ ನೀರಿನ ವ್ಯವಸ್ಥೆಯಿಲ್ಲದೇ ಕಂಗಾಲಾಗುತ್ತಿರುವ ಬಿಎಂಟಿಸಿ ಕಂಡಕ್ಟರ್, ಡ್ರೈವರ್​ಗಳು - BMTC Water Problem

ABOUT THE AUTHOR

...view details