ಮೈಸೂರು : ಗೌರಿ-ಗಣೇಶ ಹಬ್ಬವನ್ನ ನಾಡಿನಾದ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ. ಈ ಆಚರಣೆಗೆ ಮಾರುಕಟ್ಟೆಯಲ್ಲಿ ವಿವಿಧ ವಸ್ತುಗಳನ್ನ ಖರೀದಿಸುವುದು ವಾಡಿಕೆ. ಅದರಲ್ಲೂ ಗೌರಿ ಹಬ್ಬದ ದಿನ ಮದುವೆಯಾದ ತಮ್ಮ ಹೆಣ್ಣು ಮಕ್ಕಳಿಗೆ ತವರಿನ ಕಡೆಯಿಂದ ಬಾಗಿನ ಕೊಡುವುದು ವಾಡಿಕೆ. ಇಂತಹ ಬಾಗಿನದ ಸಂದರ್ಭದಲ್ಲಿ ಹೊಸದಾಗಿ ಮದುವೆಯಾದ ಮಗಳಿಗೆ ತಂದೆ-ತಾಯಿ ತವರು ಮನೆಯಿಂದ ಮಗಳ ಗಂಡನ ಮನೆಗೆ ಹೋಗಿ ಬಿದಿರಿನ ಮೊರದಲ್ಲಿ ಬಾಗಿನ ಕೊಡುತ್ತಾರೆ. ಇಂತಹ ಬಿದಿರಿನ ಮೊರಕ್ಕೆ ಈ ಹಬ್ಬದ ವೇಳೆ ತುಂಬಾ ಬೇಡಿಕೆಯಿದೆ. ಆದರೆ ಇದನ್ನ ತಯಾರಿಸುವ ಕುಟುಂಬದವರ ಬದುಕಿಗೆ ನೆಲೆ ಇಲ್ಲದಂತಾಗಿದೆ.
ಈ ಬಗ್ಗೆ ಬಿದಿರಿನ ಮೊರ ತಯಾರಕ ಸಿದ್ದರಾಜು ಮಾತನಾಡಿ, 'ಮಡಿಕೇರಿಯಿಂದ ಬಿದಿರು ತರಿಸಬೇಕು, ಅದನ್ನು ಬ್ಲಾಕ್ ಅಲ್ಲಿ ಮಾರಬೇಕು. ಅದರಿಂದ ನಮಗೂ ಏನು ಲಾಭ ಸಿಗಲ್ಲ. ಒಂದು ಜತೆ ಬಿದಿರಿನ ಮೊರಕ್ಕೆ 150 ರಿಂದ 200 ರೂಪಾಯಿವರೆಗೆ ಮಾರಾಟ ಮಾಡಲಾಗುತ್ತದೆ. ನಮಗೆ ಮಾಮೂಲಿ ರೇಟ್ನಲ್ಲಿ 100 ರೂ. ಸಿಗುತ್ತೆ. ಈಗ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ಅಲ್ಲಿಂದ ಬಿದಿರು ತರಲು ಹಿಂಸೆಯಾಗುತ್ತೆ. ಅದರಿಂದಾಗಿ ನಮಗೆ ರೇಟ್ ಜಾಸ್ತಿಯಾಗುತ್ತೆ. ಇಲ್ಲಿಯೂ ದುಬಾರಿಯಾಗುತ್ತೆ. ಇದರಲ್ಲಿ ನಮಗೆ ಏನೂ ಸಿಗಲ್ಲ. ಮಳೆಬಂದು ಮಡಿಕೇರಿ, ಭಾಗಮಂಡಲದಲ್ಲಿ ಮುಚ್ಚಿಹೋದ್ರೆ ನಮಗೆ ಅದೂ ಇಲ್ಲದಂತಾಗುತ್ತೆ. ಆದರೂ ಕುಲ ಕಸುಬನ್ನು ಬಿಡಬಾರದು ಎಂದು ಇದನ್ನು ಮಾಡಿಕೊಂಡು ಬಂದಿದ್ದೇವೆ' ಎಂದಿದ್ದಾರೆ.