ಬಳ್ಳಾರಿ:"ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಕುಟುಂಬಗಳಿಗೆ ಈಗಾಗಲೇ ಎರಡು ಲಕ್ಷ ರೂ ಪರಿಹಾರ ಘೋಷಿಸಲಾಗಿತ್ತು. ಇದೀಗ ಆ ಮೊತ್ತವನ್ನು ಐದು ಲಕ್ಷಕ್ಕೇರಿಸಲು ನಿರ್ಧರಿಸಿದ್ದೇವೆ" ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಂಡೂರಿನಲ್ಲಿಂದು ಮತದಾರರಿಗೆ ಅಭಿನಂದನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
"ಮುಡಾ, ವಕ್ಪ್, ವಾಲ್ಮೀಕಿ ಹಗರಣದ ಬಗ್ಗೆ ಸುಳ್ಳು ಆರೋಪ ಮಾಡೋದನ್ನು ನಿಲ್ಲಿಸಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ನಾಚಿಕೆ ಆಗಬೇಕು. ಸಿದ್ದರಾಮಯ್ಯ ಸರ್ಕಾರ ಅಬಕಾರಿ ಇಲಾಖೆಯಿಂದ 750 ಕೋಟಿ ರೂ ಸಂಗ್ರಹಿಸಿ ಮಹಾರಾಷ್ಟ್ರ ಚುನಾವಣೆಗೆ ಕೊಟ್ಟಿದೆ ಅಂತಾ ಮೋದಿ ಆರೋಪ ಮಾಡಿದ್ರು. ನಿಮ್ಮ ಆರೋಪ ನಿಜವಾದ್ರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ನಾನು ಮೋದಿ ಅವರಿಗೆ ಹೇಳಿದ್ದೆ. ಆರೋಪ ಸಾಬೀತು ಮಾಡಿಲ್ಲ ಅಂದ್ರೆ ನೀವು ರಾಜೀನಾಮೆ ಕೊಡುತ್ತೀರಾ ಅಂತಲೂ ಕೇಳಿದ್ದೆ. ಅದಕ್ಕವರು ಬಾಯಿ ಬಿಡಲಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ (ETV Bharat) "ಚನ್ನಪಟ್ಟಣ, ಶಿಗ್ಗಾಂವಿಯಲ್ಲಿ ಕೂಡ ನಮ್ಮ ಅಭ್ಯರ್ಥಿಗಳು ಗೆದ್ದಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿದ್ರು. ಜನರ ಆಲೋಚನೆಯನ್ನು ಜೆಡಿಎಸ್‌ನವರು ಅರ್ಥ ಮಾಡಿಕೊಳ್ಳಬೇಕು. ನಿಮಗೆ ಮಾನ, ಮರ್ಯಾದೆ ಇದ್ರೆ ಸರ್ಕಾರದ ಜೊತೆ ಸಹಕರಿಸಿ. ರಚನಾತ್ಮಕ ಟೀಕೆ ಮಾಡಿದರೆ ಅದಕ್ಕೆ ನಾವು ಉತ್ತರ ಕೊಡ್ತೇವೆ" ಎಂದರು.
ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ:"ಬಿಜೆಪಿ ಬಡವರ, ಸಂವಿಧಾನ ಪರವಾಗಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಯಾವುದೇ ಜಾತಿ, ಪಕ್ಷ ಭೇದ ಮಾಡದೇ ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ನೀವು ಮನ್ನಣೆ ಕೊಡಬೇಕು, ಪಕ್ಷಕ್ಕೆ ಶಕ್ತಿ ಕೊಡಬೇಕು ಅಂತಾ ಮನವಿ ಮಾಡಿದ್ವಿ. ನೀವು ಗ್ಯಾರಂಟಿ ಯೋಜನೆಗಳಿಗೆ ಮನ್ನಣೆ ಕೊಟ್ಟಿದ್ದೀರಿ. ನಾವು 2028ರವರೆಗೆ ಅಧಿಕಾರದಲ್ಲಿ ಇರುತ್ತೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ. 2028ರ ಬಳಿಕ ಮತ್ತೆ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆ ಮುಂದುವರಿಸುತ್ತೇವೆ" ಎಂದು ಸಿಎಂ ಭರವಸೆ ನೀಡಿದರು.
"ತುಕಾರಾಂ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ನಂತರ ಈ ಕ್ಷೇತ್ರ ತೆರವಾಗಿತ್ತು. ನಿಮ್ಮೆಲ್ಲರ ಅಭಿಪ್ರಾಯದಂತೆ ಅನ್ನಪೂರ್ಣ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ಅವರನ್ನ ನೀವು ಆಯ್ಕೆ ಮಾಡಿ ವಿಧಾನಸಭೆಗೆ ಕಳುಹಿಸಿದ್ದೀರಿ. ಈ ಚುನಾವಣೆಯಲ್ಲಿ ಅನ್ನಪೂರ್ಣ ಅವರಿಗೆ ಆಶೀರ್ವಾದ ಮಾಡಿ ಸಂಡೂರು ಕಾಂಗ್ರೆಸ್ ಭದ್ರಕೋಟೆ ಅಂತಾ ಸಾಬೀತು ಮಾಡಿದ್ದೀರಿ. ಸಂಡೂರು ಕ್ಷೇತ್ರದ ಮತದಾರರಿಗೆ, ಕಾರ್ಯಕರ್ತರಿಗೆ ವಿಶೇಷ ಧನ್ಯವಾದ" ಎಂದರು.
ಇದನ್ನೂ ಓದಿ:ಐವಿ ಫ್ಲ್ಯೂಯೆಡ್ ಕಂಪನಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಆದೇಶಿಸಲಾಗುವುದು: ಸಚಿವ ದಿನೇಶ್ ಗುಂಡೂರಾವ್