ಬೆಳಗಾವಿ:ಬಿಜೆಪಿ ಅಭ್ಯರ್ಥಿಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವ ವಿಷಯ ಈಗ ಮುಗಿದು ಹೋಗಿದೆ. ಈ ಆರೋಪಕ್ಕೆ ಈಗಾಗಲೇ ಶೆಟ್ಟರ್ ಅವರೇ ಉತ್ತರ ಕೊಟ್ಟಿದ್ದಾರೆ. ಸ್ಥಳೀಯರು ಟಿಕೆಟ್ ಕೇಳಿದ್ದರಿಂದ ಹೊಗಿನವರು ಎನ್ನುವ ವಿಚಾರ ಪ್ರಸ್ತಾಪ ಆಗಿತ್ತು. ಕಾಂಗ್ರೆಸ್ಸಿನವರು ಆರೋಪ ಮಾಡಬೇಕು ಎಂದು ಏನಾದರೂ ಹೇಳುತ್ತಾರೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿರುಗೇಟು ನೀಡಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಸ್ವಾಭಿಮಾನ ಮತ್ತೊಂದು ನೆನಪಾಗುತ್ತದೆ. ಯಾರೇ ಚುನಾವಣೆಗೆ ನಿಂತರೂ ಇದನ್ನು ಹೇಳುತ್ತಾರೆ. ಅದು ತಪ್ಪು ಅಂತಾ ಹೇಳೋಕೆ ಆಗೋದಿಲ್ಲ. ಜಗದೀಶ್ ಶೆಟ್ಟರ್ ಹೊರಗಿನವರು ಎನ್ನುವುದನ್ನು ಜನ ಮರೆತಿದ್ದಾರೆ. ಚುನಾವಣೆ ಅಷ್ಟೊತ್ತಿಗೆ ಪೂರ್ತಿ ಮರೆತು, ಬೆಳಗಾವಿ ಜನ ಅವರನ್ನು ಸ್ವೀಕರಿಸುತ್ತಾರೆ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಜನ ಬಂದಿದ್ದರು. ಮೋದಿ ಅಲೆ ಇರೋದು ಜನರ ಪ್ರತಿಕ್ರಿಯೆ ನೋಡಿದ್ರೆ ಗೊತ್ತಾಗುತ್ತೆ. ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ಹಾಗಾಗಿ ಹೆಚ್ಚಿನ ಮತಗಳ ಅಂತರದಿಂದ ಶೆಟ್ಟರ್ ಗೆಲ್ಲುತ್ತಾರೆ. ಜಗದೀಶ್ ಶೆಟ್ಟರ್ ಗೆದ್ದು ಕೇಂದ್ರ ಮಂತ್ರಿ ಆದರೆ ಒಳ್ಳೆಯದು. ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. . ಅದರಿಂದ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಅಸ್ತ್ರ ಪ್ರಯೋಗ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಬಂದಾಗ ಇದೆಲ್ಲ ಸ್ವಾಭಾವಿಕ. ಜನ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮೋದಿ ಫೇಸ್ ವ್ಯಾಲ್ಯೂ ಜಾಸ್ತಿ ಇದೆ. ಇದೆಲ್ಲ ವರ್ಕ್ ಔಟ್ ಆಗಲ್ಲ. ಚುನಾವಣೆಯನ್ನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇವೆ. ಹಾಗಂತ ಜಿದ್ದಿಗೆ ಬಿದ್ದು ಯಾರದೋ ಜೊತೆಗೂ ಕುಸ್ತಿ ಹಿಡಿದು ಮಾಡುತ್ತಿಲ್ಲ. ನಮ್ಮ ಚುನಾವಣೆ ಹೇಗೆ ಆರಾಮವಾಗಿ, ಶಾಂತಿ, ಸಂಯಮದಿಂದ ಮಾಡುತ್ತೆವೋ, ಅದೇ ರೀತಿ ಮತ ನೀಡುವಂತೆ ಜನರ ಬಳಿ ಕೇಳಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.