ಬೆಂಗಳೂರು: ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಜೈಲಿನಲ್ಲಿ ಕಳೆದರೆ, ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಪ್ರತಿಪಾದಿಸುವ ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಸೆಕ್ಷನ್ 479, ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ನಕಲಿ ದಾಖಲೆ ಸೃಷ್ಟಿಸಿ ಠೇವಣಿದಾರರಿಗೆ 1,522 ಕೋಟಿ ರೂ. ಹಣ ವಂಚಿಸಿದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಕಾರಣಕ್ಕೆ ಬಿಎನ್ಎನ್ಎಸ್ ಸೆಕ್ಷನ್ 479 ಅನ್ನು ಆಧರಿಸಿ ಜಾಮೀನು ನೀಡುವಂತೆ ಕೋರಿ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ಶ್ರೀಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ - ಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಕೆ.ರಾಮಕೃಷ್ಣ (73) ಅವರು ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ಪೀಠ, ಈ ಆದೇಶ ಮಾಡಿದೆ.
ನ್ಯಾಯಪೀಠದ ಆದೇಶದ ವಿವರ:''ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಎರಡು ವರ್ಷ ಏಳು ತಿಂಗಳು ಕಳೆದಿರುವುದರಿಂದ ಬಿಎನ್ಎಸ್ಎಸ್ ಸೆಕ್ಷನ್ 479(1) ಆಧರಿಸಿ ಜಾಮೀನು ನೀಡಲು ಅರ್ಜಿದಾರರು ಕೋರಿದ್ದಾರೆ. ಆದರೆ, ಬಿಎನ್ಎಸ್ಎಸ್ ಸೆಕ್ಷನ್ 479 (2) ಪ್ರಕಾರ, ವ್ಯಕ್ತಿಯೋರ್ವನ ವಿರುದ್ಧ ಹಲವು ಪ್ರಕರಣ ದಾಖಲಾಗಿ, ಅದರಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತನಿಖೆ, ವಿಚಾರಣೆ ಅಥವಾ ಕೋರ್ಟ್ ವಿಚಾರಣೆ ಬಾಕಿಯಿದ್ದರೆ, ಆ ಆತನನ್ನು ನ್ಯಾಯಾಲಯ ಜಾಮೀನು ಮೇಲೆ ಬಿಡುಗಡೆ ಮಾಡಬಾರದು ಎಂದು ಹೇಳುತ್ತದೆ. ಇನ್ನೂ ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷೆ ಅವಧಿಯ ಅರ್ಧಕ್ಕಿಂತ ಹೆಚ್ಚು ಅವಧಿಯವರೆಗೆ ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರೆಸಿ ಆದೇಶಿಸಲು ಬಿಎನ್ಎಸ್ಎಸ್ ಸೆಕ್ಷನ್ 479(1) ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಹಾಗಾಗಿ, ಜಾಮೀನು ನೀಡಬೇಕಾದ ಸಂದರ್ಭದಲ್ಲಿ ಸೆಕ್ಷನ್ 479, 479(1) ಮತ್ತು 479(2) ಅನ್ನು ಜೊತೆಗೂಡಿ ಓದಬೇಕಾಗುತ್ತದೆ'' ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.
''ಅರ್ಜಿದಾರರ ವಿರುದ್ಧ ಅಕ್ರಮ ಹಣ ವರ್ಗಾವಣೆ(ಪಿಎಂಎಲ್ಎ)ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯ ಪ್ರತ್ಯೇಕವಾಗಿ ಅಂದರೆ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆಯ ಸೆಕ್ಷನ್ 9 ಅಡಿಯೂ ಕೇಸ್ ದಾಖಲಾಗಿದೆ. ಆ ಪ್ರಕರಣಗಳ ಆರೋಪಗಳು ಒಂದಕ್ಕಿಂತ ಹೆಚ್ಚಿವೆ ಮತ್ತು ಒಂದಕ್ಕೊಂದು ವಿಭಿನ್ನವಾಗಿಯೂ ಇವೆ'' ಎಂದಿದೆ.