ಮೈಸೂರು:ಜನವರಿ 14ರಿಂದ 19ರ ವರೆಗೆ ಕರ್ನಾಟಕ ಕಲಾ ಮಂದಿರದಲ್ಲಿ ರಾಷ್ಟ್ರೀಯ ಬಹುರೂಪಿ ನಾಟಕೋತ್ಸವ ನಡೆಯಲಿದೆ. ನಾಟಕೋತ್ಸವಕ್ಕೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಕೈಜೋಡಿಸುವ ಮೂಲಕ ಯಶಸ್ವಿಗೊಳಿಸಲು ಸಹಕರಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮನವಿ ಮಾಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬಹುರೂಪಿ ನಾಟಕೋತ್ಸವ-2025ರ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೈಸೂರು ಜಿಲ್ಲೆಗೆ ರಂಗಾಯಣವು ಒಂದು ಹೆಮ್ಮೆ, ಮಾನ್ಯ ಮುಖ್ಯಮಂತ್ರಿಗಳ ತವರು ಜಿಲ್ಲೆ. ನಾಡಹಬ್ಬ ದಸರಾವನ್ನು ಮೈಸೂರು ಜಿಲ್ಲೆಯಲ್ಲಿ ಆಚರಿಸುವುದು ನಮ್ಮ ಜಿಲ್ಲೆಗೆ ಕೀರ್ತಿ. ನಾಟಕೋತ್ಸವದಲ್ಲಿ ನಾಗರಿಕ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ನಾಟಕಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ವತಿಯಿಂದ ಕಲಾಮಂದಿರ ಹಾಗೂ ರಂಗಾಯಣದ ಆವರಣದಲ್ಲಿ ಸ್ವಚ್ಛತೆ ಮಾಡಬೇಕು. ಶುದ್ಧ ಕುಡಿಯುವ ನೀರು, ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಸರ್ಕಾರದ ಯೋಜನೆಗಳಿಗೆ ಪ್ರಚಾರ ನೀಡಲು ವ್ಯವಸ್ಥೆ ಮಾಡಿರುವ ಡಿಜಿಟಲ್ ಸ್ಕ್ರೀನ್ ಮೂಲಕ ಉತ್ಸವದ ಪ್ರಚಾರ ಮಾಡಬೇಕು. ಬಹುರೂಪಿ ನಾಟಕೋತ್ಸವ ನಡೆಯುವುದರಿಂದ ಆ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ಚೆಸ್ಕಾ ಅಧಿಕಾರಿಗಳು ಜಾಗ್ರತೆ ವಹಿಸಬೇಕು. ಉತ್ಸವದ ದಿನಗಳಲ್ಲಿ ಸಂಜೆ 6ರಿಂದ ರಾತ್ರಿ 10 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಬಸ್ ಸೌಲಭ್ಯವನ್ನು ಕೆಎಸ್ಆರ್ಟಿಸಿ ವತಿಯಿಂದ ಒದಗಿಸಬೇಕು. ಶಾಲಾ ಕಾಲೇಜು ಶಿಕ್ಷಕರು ಹಾಗೂ ಮಕ್ಕಳು ನಾಟಕೋತ್ಸವದಲ್ಲಿ ಭಾಗವಹಿಸಲು ಅವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.