ಕಡಬ (ದಕ್ಷಿಣ ಕನ್ನಡ):ಎದೆಹಾಲು ಉಣಿಸುವ ವೇಳೆ ತನ್ನ ಹೆಣ್ಣುಮಗು ಆಕಸ್ಮಿಕವಾಗಿ ಮೃತಪಟ್ಟ ಕಾರಣದಿಂದ ಮಾನಸಿಕವಾಗಿ ನೊಂದ ತಾಯಿಯೂ ಆತ್ಮಹತ್ಯೆಗೆ ಶರಣಾದ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದಲ್ಲಿ ನಡೆದಿದೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ವನಿತಾ (38) ಆತ್ಮಹತ್ಯೆ ಮಾಡಿಕೊಂಡವರು.
ವನಿತಾ ಅವರಿಗೆ ಮೂರು ವರ್ಷದ ಗಂಡು ಮಗು ಇದ್ದು, ಮೂರು ತಿಂಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಎದೆಹಾಲು ಕೊಟ್ಟ ತಾಯಿ ವನಿತಾ ಅವರು ಮಗುವನ್ನು ತಕ್ಷಣ ಮಲಗಿಸಿದ ಕಾರಣ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.
ಇದರಿಂದ ವನಿತಾ ಅವರು ಮಾನಸಿಕವಾಗಿ ನೊಂದುಕೊಂಡು ಖಿನ್ನತೆಗೊಳಗಾಗಿದ್ದರು. ಇದಕ್ಕೆ ಚಿಕಿತ್ಸೆ ಕೊಡಿಸುವ ಸಲುವಾಗಿ ಪತಿಯು, ವನಿತಾ ಅವರನ್ನು ತಾಯಿ ಮನೆಯಾದ ರಾಮಕುಂಜದಲ್ಲಿ ಬಿಟ್ಟು ಹೋಗಿದ್ದರು. ಏಪ್ರಿಲ್ 2ರಂದು ಮನೆಯವರೆಲ್ಲಾ ಹೊರಗೆ ಹೋಗಿದ್ದ ವೇಳೆ ಮನೆಯ ಕೋಣೆಯಲ್ಲಿ ಮರದ ಅಡ್ಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವನಿತಾ ಅವರ ಸಹೋದರ ದಿವಾಕರ್ ಕೆ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳ ಬಗ್ಗೆ ಎಚ್ಚರಿಕೆ ಅಗತ್ಯ:ಹಸುಗೂಸಿಗೆ ಎದೆಹಾಲು ಉಣಿಸಿದ ಬಳಿಕ ಅಥವಾ ಯಾವುದೇ ಫುಡ್ ಮಿಕ್ಸ್ ಕೊಟ್ಟ ಬಳಿಕ ಮಗುವಿನ ತೇಗು ಹೋಗಿದೆಯಾ ಅಂತ ತಾಯಿ ಗಮನಿಸದೇ ಇದ್ದರೆ ಎಂತಹ ಪರಿಣಾಮ ಆಗಬಹುದು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ. ಮಗುವಿಗೆ ಎದೆ ಹಾಲು ಅಥವಾ ಇನ್ಯಾವುದೇ ಆಹಾರ ನೀಡಿದ ಬಳಿಕ ಮಗುವನ್ನು ಒಂದಷ್ಟು ಹೊತ್ತು ತಿರುಗಾಡಿಸಬೇಕು. ಮಗು ತೇಗು ತೆಗೆದಿಲ್ಲವೆಂದರೆ ಮಗುವಿನ ಬೆನ್ನು ತಟ್ಟಿ ತೇಗು ತೆಗೆಸಬೇಕು. ಹಿಂದಿನ ಕಾಲದ ಹಿರಿಯರಿಗೆ ಈ ಪದ್ಧತಿ ಬಗ್ಗೆ ತಿಳಿವಳಿಕೆ ಇತ್ತು. ಆದರೆ ಈಗಿನವರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಗು ಅಳುತ್ತಿದೆ ಎಂದು ಎದೆಹಾಲು ಕೊಟ್ಟು ಹಾಗೇ ಮಲಗಿಸುವುದು ಸರಿಯಲ್ಲ ಎನ್ನುತ್ತಾರೆ ಮಕ್ಕಳ ತಜ್ಞರು.
ಇದನ್ನೂ ಓದಿ:ಬೋರ್‌ವೆಲ್ ಪ್ರಕರಣದಲ್ಲಿ ಸಾವು ಗೆದ್ದ ಬಾಲಕನ ಮನೋಸ್ಥೈರ್ಯ ಮೆಚ್ಚುವಂಥದ್ದು: ಜಿಲ್ಲಾ ಸರ್ಜನ್ - Satvik Health