ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (ETV Bharat) ಮೈಸೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಒಂದೇ ಒಂದು ಕೈಗಾರಿಕೆಗಳು ಬರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಆರೋಪಿಸಿದರು.
ಸಂಡೂರು ಕೈಗಾರಿಕಾ ವಲಯದ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಪ್ರತಿ ನಿರ್ಧಾರದಲ್ಲೂ ಮೊಸರಲ್ಲಿ ಕಲ್ಲು ಹುಡುಕುವ ರೀತಿ ವರ್ತಿಸುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಕೈಗಾರಿಕೆಗಳನ್ನ ಸ್ಥಾಪಿಸಲು ಹೊರಟಾಗ ಅದಕ್ಕೂ ತಕರಾರು ಮಾಡುತ್ತಿದೆ. ಎಲ್ಲದರಲ್ಲೂ ರಾಜಕೀಯ ಮಾಡುತ್ತಾ ಕೂತರೆ ರಾಜ್ಯದ ಅಭಿವೃದ್ಧಿ ಹೇಗೆ? ಆಗುತ್ತದೆ ಹೇಳಿ ಎಂದು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾದ ಮೇಲೆ ಅದರ ಸೇಡು ತೀರಿಸಿಕೊಳ್ಳಲು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಸರ್ಕಾರದ ಜನರ ಮೇಲೆ ಸೇಡಿನ ರಾಜಕಾರಣ ಮಾಡುವುದನ್ನ ನಿಲ್ಲಿಸಬೇಕು. ತಕ್ಷಣವೇ ಸರ್ಕಾರ ತೈಲ ಬೆಲೆ ಇಳಿಸಬೇಕು. ಗ್ಯಾರಂಟಿ ಕೊಟ್ಟರೂ ಜನ ಅವರ ಕೈ ಹಿಡಿಯಲಿಲ್ಲ. ಈ ಸಿಟ್ಟು ಸರ್ಕಾರಕ್ಕೆ ಇದೆ. ಹೀಗಾಗಿ ಜನ ವಿರೋಧಿ ನಿರ್ಧಾರಗಳನ್ನ ಮಾಡುತ್ತಿದೆ ಎಂದು ದೂರಿದರು.
ಚನ್ನಪಟ್ಟಣ ಉಪಚುನಾವಣೆ ವಿಚಾರವಾಗಿ ಮಾತನಾಡಿ, ನಾಡಿದ್ದು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಈ ವಿಚಾರ ಚರ್ಚೆ ಮಾಡುತ್ತೇನೆ. ಸೀಟು ಬಿಟ್ಟುಕೊಡುವ ಅಥವಾ ತೆಗೆದುಕೊಳ್ಳುವ ಬಗ್ಗೆ ಇನ್ನೂ ಯಾವುದೇ ತೀರ್ಮಾನಗಳು ನಡೆದಿಲ್ಲ. ಮೊದಲ ಹಂತದ ಚರ್ಚೆಗಳು ಈ ವಿಚಾರದಲ್ಲಿ ಆಗಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಒಟ್ಟಾಗಿ ಸೇರಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಯೋಗೇಶ್ವರ ಅವರನ್ನ ಕರೆದು ಮಾತನಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ಯಾರೇ ಸ್ಪರ್ಧೆ ಮಾಡಲಿ, ಅದು ಅವರಿಗೆ ಬಿಟ್ಟದ್ದು. ಜನ ಮನಸ್ಸು ಮಾಡಿದರೇ ಎಂತಹ ಫಲಿತಾಂಶ ಬರುತ್ತದೆ ಎಂಬುದಕ್ಕೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶವೇ ಸಾಕ್ಷಿ. ಯಾರು ಎಷ್ಟು ಬಲಾಢ್ಯರು ಎಂದುಕೊಂಡರೂ ಜನರ ತೀರ್ಮಾನವೇ ಅಂತಿಮ ಎಂದು ವಿಜಯೇಂದ್ರ ಹೇಳಿದ್ರು.
ಸೂರಜ್ ರೇವಣ್ಣ ಬಂಧನ ವಿಚಾರ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಬಿ. ವೈ ವಿಜಯೇಂದ್ರ, ಆ ವಿಚಾರ ಬೇಡ ಬಿಡಿ ಎಂದು ಮುಂದೆ ತೆರಳಿದರು.
ಇದನ್ನೂ ಓದಿ :ಕೇಂದ್ರ ಸಚಿವರಾಗಿ ಹೆಚ್ಡಿಕೆ ಸಹಿ ಮಾಡಿದ ಮೊದಲ ಕಡತಕ್ಕೆ ರಾಜ್ಯ ಸರ್ಕಾರ ತಡೆ - KIOCL File