ಬೆಂಗಳೂರು:"ದೇಶಾದ್ಯಂತ ಪಕ್ಷ ಸಂಘಟನಾ ಪರ್ವ ಪ್ರಕ್ರಿಯೆ ನಡೆಯುತ್ತಿದೆ. ಸದಸ್ಯತ್ವ ಅಭಿಯಾನ, ಸಕ್ರಿಯ ಸದಸ್ಯ ಅಭಿಯಾನ, ಜಿಲ್ಲಾ ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಬೆಂಗಳೂರಿಗೆ ಬಂದಿದ್ದಾರೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬೆಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಅವರನ್ನು ಇಂದು ಆತ್ಮೀಯವಾಗಿ ಬರಮಾಡಿಕೊಂಡ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
"ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಡೀ ದಿನ ಸಂಘಟನಾ ಸಭೆಗಳು ನಡೆಯಲಿವೆ. ಈ ವಿಚಾರ ಬಿಟ್ಟರೆ ರಾಜಕೀಯವಾಗಿ ಬೇರೇನೂ ಇಲ್ಲ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲು ಅವರು ಬಂದಿಲ್ಲ. ರಾಜಕೀಯ ಸಂಬಂಧ ವಿಚಾರವಾಗಿದ್ದರೆ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಬರುತ್ತಿದ್ದರು. ಸಂಘಟನೆ ದೃಷ್ಟಿಯಿಂದ ಮಾತ್ರ ತರುಣ್ ಚುಗ್ ಭೇಟಿ ನೀಡಿದ್ದಾರೆ" ಎಂದು ವಿಜಯೇಂದ್ರ ಹೇಳಿದರು.