ಹುಬ್ಬಳ್ಳಿ:ಕಾಂಗ್ರೆಸ್ ನಾಯಕರು ಈ ಹಿಂದೆ ದೇಶ ವಿಭಜಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಂಡಿದ್ದಾರೆ. ಈಗಲೂ ಅದೇ ಚಾಳಿ ಮುಂದುವರೆಸಿರುವ ಸಂಸದ ಡಿ.ಕೆ.ಸುರೇಶ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ದೇಶ, ರಾಜ್ಯ, ನಗರಗಳು ಅಭಿವೃದ್ಧಿಯಾಗಲಿ ಎಂಬ ಕಾರಣಕ್ಕೆ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆಯೇ ಹೊರತು ದೇಶವನ್ನು ಇಬ್ಭಾಗಿಸಲು ಅಲ್ಲ. ದೇಶವನ್ನು ಇಬ್ಭಾಗ ಮಾಡುವ ಉದ್ದೇಶ ಅವರ ಮನದಲ್ಲಿ ಇದ್ದುದಕ್ಕೆ, ಆ ತರಹದ ಹೇಳಿಕೆ ಅವರ ಬಾಯಲ್ಲಿ ಬಂದಿದೆ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಇದಕ್ಕೆ ನಮ್ಮಲ್ಲಿ ಆಸ್ಪದವಿಲ್ಲ. ಹೀಗಾಗಿ ಡಿ.ಕೆ.ಸುರೇಶ್ ಹೇಳಿಕೆಗೆ ಕ್ಷಮೆ ಇಲ್ಲ. ಅವರ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸಲು ಚಿಂತನೆ ನಡೆಸಲಾಗುವುದು ಎಂದರು.
ಕೇಂದ್ರ ಸರ್ಕಾರ ಮೊನ್ನೆ ಮಂಡಿಸಿದ್ದು ಮಧ್ಯಂತರ ಬಜೆಟ್. ಅದು ಹೊಸ ಬಜೆಟ್ ಅಲ್ಲ. ಅದನ್ನೇ ಮುಂದಿಟ್ಟುಕೊಂಡು ಡಿ.ಕೆ.ಸುರೇಶ್ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ. ರಾಷ್ಟ್ರ ಇಬ್ಭಾಗದ ಹೇಳಿಕೆ ನೀಡಿದ್ದಾರೆ. ಇದನ್ನೇ ಪ್ರತಿವಾದಿಸುತ್ತಿರುವ ಕಾಂಗ್ರೆಸ್ ನಾಯಕರು ದೆಹಲಿ ಚಲೋ ಎಂದು ಹೊರಟಿದ್ದಾರೆ. ರಾಜಕೀಯಕ್ಕಾಗಿ ಇವರು ವ್ಯವಸ್ಥಿತ ಯೋಜನೆ ಸಿದ್ಧಪಡಿಸಿ, ಜನರ ಗಮನ ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನ್ಯಾಯ ಆಗಿಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ 70 ಸಾವಿರ ಕೋಟಿ ರೂ ತೆರಿಗೆ ಹಣ ರಾಜ್ಯಕ್ಕೆ ಬಂದಿತ್ತು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ರಾಜ್ಯಕ್ಕೆ 2.20 ಲಕ್ಷ ಕೋಟಿ ರೂ ಅನುದಾನ ಬಂದಿದೆ. ಸ್ವಾತಂತ್ರ್ಯಾ ನಂತರದಿಂದ 2014ರವರೆಗೆ ರೈಲ್ವೆ ವಿದ್ಯುದ್ದೀಕರಣ ಮಾರ್ಗ ಕೇವಲ 6 ಸಾವಿರ ಕಿ.ಮೀ.ಇತ್ತು. ಆದರೆ, ಮೋದಿ ಸರ್ಕಾರದ ಅವಧಿಯಲ್ಲಿ 13ಸಾವಿರ ಕಿ.ಮೀ. ವಿದ್ಯುತ್ ರೈಲು ಮಾರ್ಗ ಮಾಡಲಾಗಿದೆ. ಇಷ್ಟೆಲ್ಲಾ ಆದಾಗಲೂ ತಾರತಮ್ಯ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.